
ಪುಣೆ: ಹಿಂದುತ್ವವಾದಿ ವಿ ಡಿ ಸಾವರ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ದಾಖಲಿಸಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪುಣೆ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದ ನಂತರ ಸಂಸದ/ಶಾಸಕರ ವಿಶೇಷ ನ್ಯಾಯಾಲಯವು 25,000 ರೂ.ಗಳ ಶ್ಯೂರಿಟಿ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದೆ.
ಹಿರಿಯ ಕಾಂಗ್ರೆಸ್ ನಾಯಕ ಮೋಹನ್ ಜೋಶಿ ಅವರು ನ್ಯಾಯಾಲಯದ ಮುಂದೆ ಶ್ಯೂರಿಟಿಯಾಗಿ ನಿಂತರು.
ರಾಹುಲ್ ಗಾಂಧಿಯವರ ಪರವಾಗಿ ವಾದ ಮಂಡಿಸಿದ ವಕೀಲ ಮಿಲಿಂದ್ ಪವಾರ್, ನ್ಯಾಯಾಲಯವು ಕಾಂಗ್ರೆಸ್ ನಾಯಕನಿಗೆ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಈಗ ಫೆಬ್ರವರಿ 18 ರಂದು ವಿಚಾರಣೆ ನಡೆಸಲಾಗುವುದು ಎಂದು ಪವಾರ್ ಹೇಳಿದ್ದಾರೆ.
2023 ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸಾವರ್ಕರ್ ಅವರು ತಮ್ಮ ಸ್ನೇಹಿತರೊಂದಿಗೆ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಖುಷಿಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಸಾವರ್ಕರ್ ಅವರ ಮೊಮ್ಮಗ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Advertisement