
ತಿರುಪತಿ: ತಿರುಪತಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಶುಕ್ರವಾರ ವಿಶೇಷ ದರ್ಶನ ವ್ಯವಸ್ಥೆ ಮಾಡಿತ್ತು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಭರವಸೆಯಂತೆ, ಟಿಟಿಡಿ, ಗಾಯಗೊಂಡವರಿಗೆ ಮುಕ್ಕೋಟಿ ಏಕಾದಶಿಯಂದು ವೈಕುಂಠ ದ್ವಾರ ದರ್ಶನವನ್ನು ಏರ್ಪಡಿಸಿತ್ತು. ಇದು ಸ್ವರ್ಗ ಖಾತರಿಪಡಿಸುತ್ತದೆ ಎಂದು ನಂಬಲಾಗಿದೆ.
'ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ, ಟಿಟಿಡಿ ಅಧಿಕಾರಿಗಳು ತಿರುಪತಿ ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರಿಗೆ ಶುಕ್ರವಾರ ವಿಶೇಷ ದರ್ಶನ ವ್ಯವಸ್ಥೆ ಮಾಡಿದ್ದರು' ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ನಂತರ, ಜಿಲ್ಲಾಡಳಿತವು ಭಕ್ತರನ್ನು ಅವರ ಊರುಗಳಿಗೆ ಹಿಂತಿರುಗಿಸಲು ವಿಶೇಷ ವಾಹನಗಳ ವ್ಯವಸ್ಥೆ ಮಾಡಿತ್ತು.
ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ(SVIMS)ಯಿಂದ 32 ಗಾಯಗೊಂಡ ಭಕ್ತರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿರುಪತಿ ಜಿಲ್ಲಾಧಿಕಾರಿ ಎಸ್. ವೆಂಕಟೇಶ್ವರ್ ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ಐವರು ಭಕ್ತರನ್ನು ಒಂದು ದಿನದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಿರುಪತಿ ದೇವಾಲಯದ ವೈಕುಂಠ ಏಕಾದಶಿ ದರ್ಶನದ ಟೋಕನ್ ನೀಡುವ ಕೇಂದ್ರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮೂಲದ ಓರ್ವ ಮಹಿಳೆ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಆಂಧ್ರಪ್ರದೇಶ ಸರಕಾರ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
Advertisement