
ಆಲಿಗಢ(ಉತ್ತರ ಪ್ರದೇಶ): ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (AMU) ಕ್ಕೆ ನಿನ್ನೆ ಗುರುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ತ್ವರಿತ ಕ್ರಮ ಕೈಗೊಂಡರು.
2 ಲಕ್ಷ ರೂಪಾಯಿ ಸುಲಿಗೆ ಬೇಡಿಕೆಯೊಡ್ಡಿ ಇಮೇಲ್ ಬಂದಿದ್ದು, ಕ್ಯಾಂಪಸ್‌ನಾದ್ಯಂತ ಸಂಪೂರ್ಣ ಶೋಧ ನಡೆಸಲಾಯಿತು. ವಿಶ್ವವಿದ್ಯಾಲಯದ ಅಧಿಕಾರಿಗಳು ಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಇಮೇಲ್ ಮೂಲದ ಬಗ್ಗೆ ತನಿಖೆ ನಡೆಸಲು ಬಾಂಬ್ ನಿಷ್ಕ್ರಿಯ ಘಟಕ, ಶ್ವಾನ ದಳ ಮತ್ತು ಸೈಬರ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ವೃತ್ತ ಅಧಿಕಾರಿ ಅಭಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ಬಾಂಬ್ ಬೆದರಿಕೆ ಮೇಲ್ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಬಾಂಬ್ ನಿಷ್ಕ್ರಿಯ ಘಟಕ ಮತ್ತು ಶ್ವಾನ ದಳವನ್ನು ತಕ್ಷಣವೇ ನಿಯೋಜಿಸಲಾಯಿತು. ಕ್ಯಾಂಪಸ್‌ನಲ್ಲಿರುವ ಎಲ್ಲಾ ಪ್ರತ್ಯೇಕ ಸ್ಥಳಗಳನ್ನು ಪೊಲೀಸರು ಸಂಪೂರ್ಣವಾಗಿ ಶೋಧಿಸಿದರು. ಸೈಬರ್ ತಂಡಗಳು ಇಮೇಲ್ ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿವೆ ಎಂದು ಹೇಳಿದರು.
ಇದುವರೆಗೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಎಎಂಯು ಪ್ರಾಕ್ಟರ್ ಪ್ರೊಫೆಸರ್ ಮೊಹಮ್ಮದ್ ವಾಸಿಮ್ ಅಲಿ ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಇಮೇಲ್ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿ ತನಿಖೆ ಮುಂದುವರೆದಿದೆ. ಈ ಕ್ಷಣದಲ್ಲಿ, ಇಮೇಲ್ ಕಳುಹಿಸುವವರ ಗುರುತು ನಮಗೆ ಸಿಕ್ಕಿಲ್ಲ. ಇಮೇಲ್‌ನಲ್ಲಿ 2 ಲಕ್ಷ ರೂಪಾಯಿ ಸುಲಿಗೆ ಬೇಡಿಕೆಯೂ ಇದೆ ಎಂದು ಹೇಳಿದರು.
ಪ್ರಕರಣ ತನಿಖೆಯಲ್ಲಿರುವಾಗ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿಡಲು ಪೊಲೀಸರು ಮತ್ತು ವಿಶ್ವವಿದ್ಯಾಲಯ ಆಡಳಿತವು ಒಟ್ಟಾಗಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ವರದಿ ಮಾಡಲು ತಿಳಿಸಿದ್ದಾರೆ.
Advertisement