
ನಾಗ್ಪುರ: 2024ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಹರಡಿದ ನಕಲಿ ನಿರೂಪಣೆಯನ್ನು ವಿಧಾನಸಭೆ ಚುನಾವಣೆಯಲ್ಲಿ ಆರ್ ಎಸ್ಎಸ್ ಹೇಗೆ ಸೋಲಿಸಿತು ಎಂಬುದನ್ನು ಅರಿತುಕೊಂಡ ನಂತರ ಎನ್ ಸಿಪಿ (ಎಸ್ ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸಂಘವನ್ನು ಹೊಗಳಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಸಂವಿಧಾನವನ್ನು ಬದಲಾಯಿಸಲು ಮತ್ತು ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ 400 ಸ್ಥಾನ ಗೆಲ್ಲಲು ಬಯಸಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಈ ನಿರೂಪಣೆ ಕೇಸರಿ ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ ಎಂದು ಬಿಜೆಪಿ ಹೇಳಿಕೊಂಡಿದ್ದರು.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶರದ್ ಪವಾರ್ ಅವರು ಇತ್ತೀಚೆಗೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಆರ್ ಎಸ್ ಎಸ್ ಕಾರಣ ಎಂದು ಹೇಳಿದ್ದರು.
ಆರ್‌ಎಸ್‌ಎಸ್ ತನ್ನ ಸಿದ್ಧಾಂತಕ್ಕೆ ಅಚಲ ನಿಷ್ಠೆಯನ್ನು ತೋರಿಸುವ ಮತ್ತು ಏನೇ ಬಂದರೂ ತಮ್ಮ ಮಾರ್ಗದಿಂದ ವಿಮುಖರಾಗದ ಬದ್ಧ ಕಾರ್ಯಕರ್ತರನ್ನು ಹೊಂದಿದೆ. ಅದೇ ರೀತಿಯ ಕೇಡರ್ ನಮಗೂ ಬೇಕು ಎಂದು ಶರದ್ ಪವಾರ್ ಹೇಳಿದ್ದರು.
"ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ, ಆರ್ ಎಸ್ ಎಸ್ ನಿಂದ ಪ್ರೇರಿತರಾದ ವಿವಿಧ ಕ್ಷೇತ್ರಗಳ ಅನೇಕ ಜನರು ಈ ನಕಲಿ ನಿರೂಪಣೆಯ ಬಲೂನ್ ಅನ್ನು ಟುಸ್ ಮಾಡಿದರು. ಶರದ್ ಪವಾರ್ ಸಾಹೇಬ್ ಬಹಳ ಬುದ್ಧಿವಂತರು. ಅವರು ಖಂಡಿತವಾಗಿಯೂ ಈ ಅಂಶವನ್ನು ಅಧ್ಯಯನ ಮಾಡುತ್ತಿದ್ದರು. ಇದು(ಆರ್ ಎಸ್ ಎಸ್) ಸಾಮಾನ್ಯ ರಾಜಕೀಯ ಶಕ್ತಿಯಲ್ಲ. ಆದರೆ ರಾಷ್ಟ್ರೀಯವಾದಿ ಶಕ್ತಿ ಎಂದು ಅವರು ಅರಿತುಕೊಂಡರು. ಅದಕ್ಕಾಗಿಯೇ ಪವಾರ್ ಅವರು ಆರ್ ಎಸ್ ಎಸ್ ಅನ್ನು ಹೊಗಳಿರಬಹುದು ಎಂದು ಫಡ್ನವಿಸ್ ಹೇಳಿದರು.
Advertisement