
ಶ್ರೀನಗರ: ಕೊರೆಯುವ ಚಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ 6.5 ಕಿ.ಮೀ ಉದ್ದದ ʼಝಡ್-ಮೋರ್ಹ್ ಸುರಂಗ ಮಾರ್ಗʼವನ್ನು ಲೋಕಾರ್ಪಣೆಗೊಳಿಸಿದರು. ಸಾವಿರಾರು ಜನರು ಈ ಕ್ಷಣಕ್ಕೆ ಸಾಕ್ಷಿಯಾದರು.
ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಆಯಕಟ್ಟಿನ ಪ್ರದೇಶದಲ್ಲಿ ನಿರ್ಮಿಸಲಾಗಿರುವ Z-ಮೋರ್ಹ್ ಸುರಂಗ ಮಾರ್ಗವು ಹಿಮಕುಸಿತ, ಭೂಕುಸಿತದಂತಹ ಎಲ್ಲ ರೀತಿಯ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿಯೂ ಸಂಚಾರ ಸಾಧ್ಯವಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ರಚನೆಯಾದ ನಂತರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.
ಝಡ್-ಮೋರ್ಹ್ ಸುರಂಗ ಮಾರ್ಗದ ಕಾಮಗಾರಿ ಮೇ 2015 ರಲ್ಲಿ ಪ್ರಾರಂಭವಾಗಿತ್ತು. ಆದರೆ ಹಣಕಾಸಿನ ಒತ್ತಡದಿಂದಾಗಿ 2018 ರಲ್ಲಿ ಕೆಲಸವನ್ನು ನಿಲ್ಲಿಸಿದ್ದರಿಂದ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು ಒಂದು ದಶಕ ತೆಗೆದುಕೊಂಡಿತು. ರೂ.2,716. 90 ಕೋಟಿ ವೆಚ್ಚದ ಸುರಂಗ ಮಾರ್ಗ ನಿರ್ಮಾಣಕ್ಕೆ ಯುಪಿಎ-2 ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಸಿ.ಪಿ. ಜೋಶಿ ಅವರು ಅಂದಿನ ಸಂಪುಟ ಸಹೋದ್ಯೋಗಿಯಾಗಿದ್ದ ಫಾರೂಖ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಸಂಸದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಆರಂಭದಲ್ಲಿ 2016-17ರೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ನಿರೀಕ್ಷಿಸಲಾಗಿತ್ತು. ಈ ಯೋಜನೆಯಿಂದ ಜಮ್ಮು ಕಾಶ್ಮೀರದ ರಸ್ತೆ ಸಂಪರ್ಕ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಸ್ಥಳೀಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
Advertisement