
ನವದೆಹಲಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದ ಗ್ರಹಣ ಕಾರ್ಯಕ್ರಮದಲ್ಲಿ ಎಸ್. ಜೈಶಂಕರ್ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕೇಂದ್ರ ಸರ್ಕಾರ ಘೋಷಿಸಿದ ನಂತರ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ವಿದೇಶಾಂಗ ಸಚಿವರನ್ನು 'ವೇಟರ್ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ನಾಯಕರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ ಎಂದು ಭಾರತದ ಮಾಧ್ಯಮಗಳ ಸುದ್ದಿ ನೋಡಿ ಅಮೆರಿಕದಲ್ಲಿನ ನನ್ನ ಸ್ನೇಹಿತರು ನಗುತ್ತಿದ್ದಾರೆ. ಸಮಾರಂಭಕ್ಕೆ ವೇಟರ್ ಆಹ್ವಾನಿಸಲಾಗಿದೆ ಆದರೆ ಪ್ರಧಾನಿಯನ್ನು ಆಹ್ವಾನಿಸಿಲ್ಲ. ಇದು ದೊಡ್ಡ ಅವಮಾನವಲ್ಲವೇ? ಆಹ್ವಾನ ಸ್ವೀಕರಿಸಿದ್ದಕ್ಕಾಗಿ ವೇಟರ್ ನನ್ನು ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಮೋದಿ ಅವರು ವೇಟರ್ (ಜೈಶಂಕರ್) ನನ್ನು ಅಮೆರಿಕಕ್ಕೆ ಕಳುಹಿಸಿದ್ದರು. ಜೊತೆಗೆ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡಿ ಬರುವಂತೆ ಅವರಿಗೆ ಸೂಚಿಸಲಾಗಿತ್ತು. ಅದರಂತೆ ಜೈಶಂಕರ್ ನಡೆದುಕೊಂಡಿದ್ದರು. ಇಲ್ಲದಿದ್ದರೆ ಅವರು ತಮ್ಮ ಹುದ್ದೆ ಕಳೆದುಕೊಳ್ಳುತ್ತಿದ್ದರು ಎಂದು ಸ್ವಾಮಿ ಆರೋಪಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಮೋದಿಯನ್ನು ಆಹ್ವಾನಿಸುವ ಮನಸ್ಥಿತಿಯಲ್ಲಿಲ್ಲ. 2023ರಲ್ಲಿ ಟ್ರಂಪ್ ಅವರ ಆಹ್ವಾನ ತಿರಸ್ಕರಿಸಿದ್ದೇನೆ ಎಂದು ಮೋದಿ ಘೋಷಿಸಿದ್ದರು. ಟ್ರಂಪ್ ಆಹ್ವಾನ ತಿರಸ್ಕರಿಸುವ ಮೂಲಕ ಅವರಿಗೆ ಮೋದಿ ನೋವುಂಟು ಮಾಡಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Advertisement