
ಪ್ರಯಾಗ್ ರಾಜ್: ಮಹಾಕುಂಭ ಮೇಳ 2025 ರಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ ಆಪಲ್ ನ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ಸ್ವಲ್ಪ ಆರೋಗ್ಯ ಹದಗೆಟ್ಟಿತ್ತು. ಆದರೆ, ಗಂಗಾ ಸ್ನಾನ ಮತ್ತು ವಿಶ್ರಾಂತಿ ನಂತರ ಅವರು ಚೇತರಿಸಿಕೊಂಡಿದ್ದಾರೆ.
ಸನಾತನ ಧರ್ಮದ ಬಗ್ಗೆ ಕಲಿಯುವ ಅವರ ಉತ್ಸಾಹವು ಬಲವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಬಿಲಿಯನೇರ್ ಉದ್ಯಮಿ-ಪರೋಪಕಾರಿ ಮಹಿಳೆಗೆ 'ಕಮಲಾ' ಎಂಬ ಹೊಸ ಹೆಸರನ್ನು ಅವರ ಗುರು ನಿರಂಜನಿ ಅಖಾರದ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ನೀಡಿದ್ದಾರೆ.
ಲಾರೆನ್ ಪೊವೆಲ್ ಜಾಬ್ಸ್ ಸೋಮವಾರ ಸ್ವಲ್ಪಕಾಲದವರೆಗೆ ಅಸ್ವಸ್ಥರಾಗಿದ್ದರು ಆದರೆ 'ಗಂಗಾ ಸ್ನಾನ' ಮತ್ತು ವಿಶ್ರಾಂತಿಯ ನಂತರ ಚೆನ್ನಾಗಿದ್ದಾರೆ. ಸನಾತನ ಧರ್ಮವನ್ನು ಆಳವಾಗಿ ಅಧ್ಯಯನ ಮಾಡುವ ಅವರ ಉತ್ಸಾಹ ಇನ್ನೂ ಬಲವಾಗಿ ಉಳಿದಿದೆ ಎಂದು ಸ್ವಾಮಿ ಕೈಲಾಶಾನಂದರು ಹೇಳಿದ್ದಾರೆ ಎಂದು ಸರ್ಕಾರದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಅಪಾರ ಜನಸಂದಣಿಯಿಂದಾಗಿ ಅವರು ಸ್ವಲ್ಪ ಅನಾರೋಗ್ಯಕ್ಕೊಳಗಾಗಿದ್ದರು ಎಂದು ಸ್ವಾಮಿ ಕೈಲಾಶಾನಂದರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಪೊವೆಲ್ ಜಾಬ್ಸ್ ಸನಾತನ ಧರ್ಮದಲ್ಲಿ ತೀವ್ರ ಆಸಕ್ತಿ ಹೊಂದಿರುವ ಸರಳ, ಸದ್ಗುಣ ಮತ್ತು ವಿನಮ್ರ ಮಹಿಳೆಯಾಗಿದ್ದಾರೆ. ಆಕೆ ಅಹಂದಿಂದ ಮುಕ್ತವಾಗಿದ್ದು, ತನ್ನ ಗುರುವಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆಕೆಯ ಎಲ್ಲಾ ಪ್ರಶ್ನೆಗಳು ಸನಾತನ ಧರ್ಮದ ಸುತ್ತ ಸುತ್ತುತ್ತವೆ ಮತ್ತು ಸಿಗುವ ಉತ್ತರಗಳಲ್ಲಿ ಹೆಚ್ಚಿನ ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಳ್ಳುತ್ತಾಳೆ ಎಂದು ಅವರು ಹೇಳಿದರು.
ಪೊವೆಲ್ ಜಾಬ್ಸ್ ಅವರ ಆಧ್ಯಾತ್ಮಿಕತೆಯ ಅನ್ವೇಷಣೆಯು ಇಲ್ಲಿಗೆ ಕರೆತಂದಿದೆ. ಅಖಾರದಲ್ಲಿ ಅವರು ನಡೆದುಕೊಂಡ ರೀತಿ ಎಲ್ಲಾವನ್ನೂ ಸ್ಪಷ್ಪಪಡಿಸುತ್ತದೆ. ಪ್ರಪಂಚದ ಅತ್ಯಂತ ಶ್ರೀಮಂತೆ, ಪ್ರಸಿದ್ಧ ಮಹಿಳೆಯಾಗಿದ್ದರೂ ಅವರು ಎಲ್ಲಿಯೂ ಅಹಂ ತೋರಿಸಲಿಲ್ಲ. ಸರಳ ಉಡುಪು ಧರಿಸಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡರು ಎಂದು ನಿರಂಜಿನಿ ಅಖಾರ ಶಿಬಿರದ ಮುಖ್ಯಸ್ಥ ಹಾಗೂ ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಮಹಾಂತ ರವೀಂದ್ರ ಪುರಿ ತಿಳಿಸಿದರು.
ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೂ ಮಾಧ್ಯಮಗಳಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಕೆಲ ವಿಡಿಯೋ ಕ್ಲಿಪ್ ಗಳಲ್ಲಿ ಕೇಸರಿ, ಹಳದಿ ಸಲ್ವಾರ್ ಧರಿಸಿದ್ದು, ಕುತ್ತಿಗೆಯಲ್ಲಿ ರುದ್ರಾಕ್ಷಿಯ ಹಾರವನ್ನು ಧರಿಸಿದ್ದಾರೆ. ಜನವರಿ 15 ರವರೆಗೆ ನಿರಂಜಿನಿ ಅಖಾರ ಶಿಬಿರದಲ್ಲಿರುವ ಕುಂಭ ಟೆಂಟ್ ನಗರದಲ್ಲಿ ಅವರು ತಂಗಿದ್ದಾರೆ. ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಮರಳಲಿದ್ದಾರೆ.
Advertisement