
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಸ್ಪೀಡ್ ರೈಲುಗಳಾದ ತೇಜಸ್, ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸಲು ಸರ್ಕಾರ ಅನುಮತಿ ನೀಡಿದೆ. ರಜೆ ಪ್ರಯಾಣ ರಿಯಾಯಿತಿ (LTC) ಅಡಿಯಲ್ಲಿ ತೇಜಸ್, ವಂದೇ ಭಾರತ್ ಮತ್ತು ಹಮ್‌ಸಫರ್ ರೈಲುಗಳಲ್ಲಿ ಪ್ರಯಾಣಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ರಜೆ ಪ್ರಯಾಣ ರಿಯಾಯಿತಿಯಡಿ ವಿವಿಧ ಪ್ರಮುಖ ರೈಲುಗಳಲ್ಲಿ ಪ್ರಯಾಣದ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ವಿವಿಧ ಕಚೇರಿಗಳು, ವ್ಯಕ್ತಿಗಳಿಂದ ಹಲವು ಮನವಿಗಳನ್ನು ಸ್ವೀಕರಿಸಿದ ನಂತರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
"ಈ ವಿಚಾರವನ್ನು ವೆಚ್ಚ ಇಲಾಖೆಯೊಂದಿಗೆ ಸಮಾಲೋಚಿಸಿ ಇಲಾಖೆಯು ಪರಿಶೀಲಿಸಿದ್ದು, ರಾಜಧಾನಿ, ಶತಾಬ್ದಿ ಮತ್ತು ದುರಂತೋ ರೈಲುಗಳನ್ನು ಹೊರತುಪಡಿಸಿ, ತೇಜಸ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಹಮ್ಸಫರ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರಜೆ ಪ್ರಯಾಣ ರಿಯಾಯಿತಿಯಡಿ ಸರ್ಕಾರಿ ನೌಕರರ ಪ್ರಯಾಣಕ್ಕೆ ಈಗ ಅನುಮತಿ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಅರ್ಹ ಕೇಂದ್ರ ಸರ್ಕಾರಿ ನೌಕರರು LTC+ ಪಡೆದಾಗ ರಜೆಯ ಜೊತೆಗೆ ಪ್ರಯಾಣಕ್ಕಾಗಿ ಖರೀದಿಸಿದ ಟಿಕೆಟ್ ಗೆ ಮರುಪಾವತಿ ಪಡೆಯುತ್ತಾರೆ.
Advertisement