
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 40 ಸ್ಟಾರ್ ಪ್ರಚಾರಕರನ್ನು ಬುಧವಾರ ಹೆಸರಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಏಳು ಮುಖ್ಯಮಂತ್ರಿಗಳು ಇದ್ದಾರೆ.
ಈ ಪಟ್ಟಿಯಲ್ಲಿ ಭೋಜ್‌ಪುರಿ ತಾರೆಯರು, ಸಂಸದರಾದ ಮನೋಜ್ ತಿವಾರಿ ಮತ್ತು ರವಿ ಕಿಶನ್, ಮತ್ತು ದಿನೇಶ್ ಲಾಲ್ ಯಾದವ್ ನಿರಾಹುವಾ ಸೇರಿದಂತೆ ಪೂರ್ವಾಂಚಲಿ ನಾಯಕರೂ ಇದ್ದಾರೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜನರು ರಾಷ್ಟ್ರ ರಾಜಧಾನಿಯಲ್ಲಿ ಗಣನೀಯ ಮತಬ್ಯಾಂಕ್ ಆಗಿದ್ದಾರೆ. ಫೆಬ್ರವರಿ 5 ರಂದು ದೆಹಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹರ್ದೀಪ್ ಸಿಂಗ್ ಪುರಿ ಮತ್ತು ಗಿರಿರಾಜ್ ಸಿಂಗ್ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ದೆಹಲಿಯಲ್ಲಿ ಪ್ರಚಾರ ಮಾಡಲಿರುವ ಏಳು ಮುಖ್ಯಮಂತ್ರಿಗಳೆಂದರೆ ದೇವೇಂದ್ರ ಫಡ್ನವಿಸ್, ಹಿಮಂತ ಬಿಸ್ವಾ ಶರ್ಮಾ, ಪುಷ್ಕರ್ ಸಿಂಗ್ ಧಾಮಿ, ಯೋಗಿ ಆದಿತ್ಯನಾಥ್, ಭಜನ್ ಲಾಲ್ ಶರ್ಮಾ, ನಯಾಬ್ ಸಿಂಗ್ ಸೈನಿ ಮತ್ತು ಮೋಹನ್ ಯಾದವ್.
ದೆಹಲಿಯ ಎಲ್ಲಾ ಏಳು ಸಂಸದರು, ದೆಹಲಿ ಬಿಜೆಪಿ ಉಸ್ತುವಾರಿ ಬೈಜಯಂತ್ ಪಾಂಡಾ, ಸಹ-ಪ್ರಭಾರಿ ಅಲ್ಕಾ ಗುರ್ಜಾರ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು ಚುನಾವಣೆಯ ಸ್ಟಾರ್ ಪ್ರಚಾರಕರಾಗಿದ್ದಾರೆ. ಆದರೆ, ಕರ್ನಾಟಕದ ಮೂಲದ ಯಾವುದೇ ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ.
1998ರಿಂದ ಅಧಿಕಾರದಿಂದ ಹೊರಗುಳಿದಿರುವ ಬಿಜೆಪಿ, 2015ರಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಸತತ ಪ್ರಯತ್ನ ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಎರಡು-ಮೂರು ರ‍್ಯಾಲಿಯ ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರದ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಏಳು ಚುನಾವಣಾ ರ‍್ಯಾಲಿಯ ಉದ್ದೇಶಿಸಿ ಮಾತನಾಡಲಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ರೋಡ್‌ಶೋಗಳಿಗೆ ಬೇಡಿಕೆ ಇದೆ, ಆದರೆ ಪಕ್ಷದ ಉನ್ನತ ನಾಯಕತ್ವ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.
Advertisement