
ಭೋಪಾಲ್: 'ಮರ್ಯಾದಾ ಹತ್ಯೆ' ಪ್ರಕರಣವೊಂದರಲ್ಲಿ, 20 ವರ್ಷದ ತನು ಗುರ್ಜರ್ ಎಂಬ ಯುವತಿಯನ್ನು ಆಕೆಯ ತಂದೆ, ಢಾಬಾ ಮಾಲೀಕ ಮಹೇಶ್ ಗುರ್ಜರ್ ಮತ್ತು ಅವರ ಸೋದರಸಂಬಂಧಿ ರಾಹುಲ್ ಗುಂಡು ಹಾರಿಸಿ ಕೊಂದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದ್ದು, ಯುವತಿಯ ಮದುವೆಗೆ ನಾಲ್ಕು ದಿನಗಳ ಮೊದಲು ಘಟಿಸಿದೆ.
ಗುರ್ಜರ್ ಸಮುದಾಯದ ಯುವತಿಗೆ ಜನವರಿ 18 ರಂದು ಭಾರತೀಯ ವಾಯುಪಡೆಯ (IAF) ಸಿಬ್ಬಂದಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆಗೆ ಆಗ್ರಾದ ನಿರುದ್ಯೋಗಿ ಗುರ್ಜರ್ ವ್ಯಕ್ತಿಯೊಂದಿಗೆ ಆರು ವರ್ಷಗಳಿಂದ ಪ್ರೇಮವಿದ್ದುದರಿಂದ ತಂದೆ ತಾಯಿ ತೋರಿಸಿದ ಯುವಕನ ಜೊತೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಳು. ವಿಷಯ ಗೊತ್ತಾಗಿ ಮನೆಯವರು ಮರ್ಯಾದೆಗೆ ಅಂಜಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಯುವತಿಯ ಮುಖ ಮತ್ತು ತಲೆಗೆ ಬಂದೂಕುಗಳಿಂದ ಹತ್ತಿರದಿಂದ ಕನಿಷ್ಠ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ. ಹುಡುಗಿಯ ತಂದೆ ಮತ್ತು ಸೋದರಸಂಬಂಧಿ ಸಹೋದರ ಸೇರಿದಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗ್ವಾಲಿಯರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ಟಿಎನ್‌ಐಇಗೆ ತಿಳಿಸಿದ್ದಾರೆ.
ಆಘಾತಕಾರಿ ಸಂಗತಿಯೆಂದರೆ, ಈ ಭೀಕರ ಹತ್ಯೆಗೆ ಕೆಲವೇ ಗಂಟೆಗಳ ಮೊದಲು, ಹುಡುಗಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದಳು, ಅದರಲ್ಲಿ ಅವಳಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ಅವಳ ಕುಟುಂಬವೇ ಹೊಣೆ ಎಂದು ಹೇಳಿದ್ದಳು.
52 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ, ಯುವತಿ ಪಿನ್ಹತ್ (ಆಗ್ರಾ) ಮೂಲದ ಭಿಖಮ್ ಮಾವೈ 'ವಿಕಿ' ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾಳೆ, ಆದರೆ ಕುಟುಂಬಸ್ಥರು ಬೇರೊಬ್ಬರೊಂದಿಗೆ ಮದುವೆಗೆ ನಿಶ್ಚಯಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರು ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ, ತಮ್ಮ ಇಚ್ಛೆಯಂತೆ ನಡೆದುಕೊಳ್ಳದಿದ್ದರೆ ಕೊಂದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿಕೊಂಡಿದ್ದಳು.
ವಿಡಿಯೋ ಬಹಿರಂಗವಾದ ನಂತರ, ಸ್ಥಳೀಯ ಪೊಲೀಸರು ಹುಡುಗಿ ಮತ್ತು ಅವಳ ತಂದೆಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಮಾಡಿದ್ದರು. ತರುವಾಯ, ಪೊಲೀಸರು ಯುವತಿಯನ್ನು ನಾರಿ ನಿಕೇತನಕ್ಕೆ ಸ್ಥಳಾಂತರಿಸಲು ಕೇಳಿದರು, ಆದರೆ ಆಕೆ ನಿರಾಕರಿಸಿದಳು. ಕೆಲವು ಗಂಟೆಗಳ ನಂತರ, ಅವಳ ತಂದೆ ಮತ್ತು ಸೋದರಸಂಬಂಧಿ ಸಮಸ್ಯೆಯನ್ನು ಪರಿಹರಿಸುವ ನೆಪದಲ್ಲಿ ಅವಳನ್ನು ಮನೆಯ ಕೋಣೆಗೆ ಕರೆದೊಯ್ದು ಹತ್ತಿರದಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಯುವತಿಯ ಪ್ರೇಮಿ ಮತ್ತು ಅವಳ ಭಾವೀ ಪತಿ ಇಬ್ಬರೂ ಒಂದೇ ಗುರ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಿಯಕರ ನಿರುದ್ಯೋಗಿಯಾಗಿದ್ದು, ಭಾವಿ ವರ ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದಾನೆ.
Advertisement