
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ, ಫ್ರೀಬೀಸ್ ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಗಿಂತ ತಾನೇನು ಕಮ್ಮಿಯಿಲ್ಲ ಎಂಬಂತೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೇಸರಿ ಪಕ್ಷದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ, ಎಎಪಿಯನ್ನು "ನಕಲು" ಮಾಡಿ ತನ್ನ ದೆಹಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹಲವಾರು 'ಉಚಿತ'ಗಳನ್ನು ಘೋಷಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ಭರವಸೆ ನೀಡಿದ "ಫ್ರೀಬೀಸ್" ಗೆ ಅನುಮತಿ ನೀಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಫೆಬ್ರವರಿ 5 ರ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರು ಇಂದು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಉಚಿತ ಕೊಡುಗೆಗಳನ್ನು ಟೀಕಿಸಿದ್ದು ತಪ್ಪು ಎಂದು ಪ್ರಧಾನಿ ಮೋದಿ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
"ಕೇಜ್ರಿವಾಲ್ ಉಚಿತ ಕೊಡುಗೆಗಳನ್ನು ನೀಡುತ್ತಾರೆ ಎಂದು ಬಿಜೆಪಿ ಪದೇ ಪದೇ ಟೀಕಿಸುತ್ತಿತ್ತು. ಆದರೆ ಇಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ದೆಹಲಿಯ ಜನರಿಗೆ ಉಚಿತ ಭಾಗ್ಯಗಳನ್ನು ನೀಡುವುದಾಗಿ ಘೋಷಿಸಿದ್ದಾರೆ" ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಜೆಪಿ ನಡ್ಡಾ ಅವರು ಕೇಜ್ರೀವಾಲ್ ರೀತಿ ಉಚಿತ ಭಾಗ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಇದಕ್ಕೆ ಒಪ್ಪಿಗೆ ನೀಡುತ್ತಾರೆಯೇ ಅಥವಾ ಈ ಹಿಂದೆ ತಾನು ಹೇಳಿದ್ದು ತಪ್ಪು ಎಂದು ಮೋದಿ ಒಪ್ಪಿಕೊಳ್ಳುತ್ತಾರೆಯೇ? ಅವರು ಇದನ್ನು ಸಾರ್ವಜನಿಕವಾಗಿ ಘೋಷಿಸಬೇಕು ಮತ್ತು ಮೋದಿಯೇ ಮುಂದೆ ಬಂದು, ಬಿಜೆಪಿ ನೀಡಿದ ಈ ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದರು.
ಪ್ರಧಾನಿ ಮೋದಿ ಇಲ್ಲಿಯವರೆಗೆ ಉಚಿತ ಕೊಡುಗೆಗಳು ಒಳ್ಳೆಯದಲ್ಲ ಎಂದು ಭಾಷಣ ಮಾಡುತ್ತಿದ್ದರು. ಈಗ ಅವರು ತಾವು ಹೇಳಿದ್ದು ತಪ್ಪು ಎಂದು ಒಪ್ಪಿಕೊಳ್ಳಬೇಕು ಮತ್ತು ಕೇಜ್ರಿವಾಲ್ ಮಾಡಿದ್ದು ಸರಿ ಎಂದು ಹೇಳಬೇಕು, ಉಚಿತ ಕೊಡುಗೆಗಳು ದೇಶಕ್ಕೆ ಹಾನಿಕಾರಕವಲ್ಲ, ದೇವರ ಪ್ರಸಾದ ಎಂದು ಹೇಳಬೇಕು ಎಂದರು.
Advertisement