
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ದಾಳಿಯ ಹಿಂದೆ ಯಾವುದೇ ಭೂಗತ ಪಾತಕಿಗಳ ಗ್ಯಾಂಗ್ ಇಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಯೋಗೇಶ್ ಕದಮ್ ಅವರು ಶುಕ್ರವಾರ ಹೇಳಿದ್ದಾರೆ.
"ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಶಂಕಿತ ವ್ಯಕ್ತಿ ಯಾವುದೇ ಗ್ಯಾಂಗ್‌ಗೆ ಸೇರಿಲ್ಲ. ಯಾವುದೇ ಗ್ಯಾಂಗ್ ಈ ದಾಳಿಯನ್ನು ನಡೆಸಿಲ್ಲ" ಎಂದು ಕದಮ್ ಅವರು ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಸೈಫ್ ಅಲಿ ಖಾನ್ ಅವರಿಗೆ ಯಾವುದೇ ಬೆದರಿಕೆ ಇರುವ ಬಗ್ಗೆ ಇಲ್ಲಿಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಅವರು ಯಾವುದೇ ಭದ್ರತೆಯನ್ನು ಕೋರಿಲ್ಲ. ಆದರೆ ಅವರು ಭದ್ರತೆ ಕೇಳಿದರೆ, ನಾವು ಸೂಕ್ತ ಕಾರ್ಯವಿಧಾನವನ್ನು ಅನುಸರಿಸುತ್ತೇವೆ" ಎಂದು ಸಚಿವರು ಹೇಳಿದರು.
ನಟನ ಮೇಲಿನ ದಾಳಿಯ ಹಿಂದಿನ ಏಕೈಕ ಉದ್ದೇಶ ಕಳ್ಳತನವಾಗಿದೆ ಎಂದು ಕದಮ್ ಸ್ಪಷ್ಟಪಡಿಸಿದರು.
ಮುಂಬೈ ಪೊಲೀಸರು ಶಂಕಿತ ದಾಳಿಕೋರ ಕಟ್ಟಡದಿಂದ ಪರಾರಿಯಾಗುತ್ತಿದ್ದಾಗ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಕದಮ್ ಹೇಳಿದರು.
ಬಂಧಿತ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಟನ ಮೇಲೆ ನಡೆದ ಚಾಕು ಇರಿತ ಪ್ರಕರಣ ಬಾಲಿವುಡ್ ಅನ್ನು ತಲ್ಲಣಗೊಳಿಸಿದೆ. ಸೈಫ್ ಅಲಿಖಾನ್ ಅವರಿಗೆ 6 ಬಾರಿ ಚಾಕುವಿನಿಂದ ಇರಿಯಲಾಗಿದೆ. ಚೂರಿ ಇರಿತದಿಂದಾಗಿ ಸೈಫ್ ಅಲಿಖಾನ್ ಅವರ ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯವಾಗಿದೆ.
ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್ ಅಲಿ ಅವರಿಗೆ, ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement