
ಶ್ರೀನಗರ: ಇದು ನಿಜಕ್ಕೂ ಕರುಣಾಜನಕ ಕಥೆ. ದಿಕ್ಕೇ ತೋಚದಂತಾದ ಮೊಹಮ್ಮದ್ ಅಸ್ಲಾಂ ಎಂಬ ದಯನೀಯನ ವ್ಯಥೆ. ಜಮ್ಮು- ಕಾಶ್ಮೀರದ ರಾಜೌರಿಯ ಗಡಿ ಜಿಲ್ಲೆಯ ದೂರದ ಬುಧಾಲ್ ಗ್ರಾಮದಲ್ಲಿ ತನ್ನ ತಾಯಿಯ ಸಂಬಂಧದಲ್ಲಿ ಮಾವ ಮತ್ತು ಅತ್ತೆ ಸೇರಿದಂತೆ ಮೂರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನಿಗೂಢ ಕಾಯಿಲೆಗೆ ಕಳೆದುಕೊಂಡಿದ್ದಾರೆ. ಈಗ ಬದುಕುಳಿದಿರುವ ಏಕೈಕ ಮಗಳ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು, ಜಮ್ಮುವಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ನಿನ್ನೆ ಶುಕ್ರವಾರ ಬೆಳಿಗ್ಗೆ, ಅಸ್ಲಾಂ ತನ್ನ ಅತ್ತೆ ಜಟ್ಟಿ ಬೇಗಂ (60ವ) ಅವರನ್ನು ನಿಗೂಢ ಕಾಯಿಲೆಯಿಂದ ಕಳೆದುಕೊಂಡರು. ಬೇಗಂ ಅವರ ಸಾವಿನೊಂದಿಗೆ, ನಿಗೂಢ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿದೆ, ಇದರಲ್ಲಿ 4 ಮಂದಿ ವಯಸ್ಕರು ಮತ್ತು 12 ಮಕ್ಕಳು ಸೇರಿದ್ದಾರೆ.
ಈ ವರ್ಷ ಜನವರಿ 9 ರಿಂದ ಅಸ್ಲಾಂ ಅವರ ಕುಟುಂಬದಲ್ಲಿ ಇದು ಏಳನೇ ನಿಗೂಢ ಸಾವು. ಅವರ ಮಾವ ಮೊಹಮ್ಮದ್ ಯೂಸುಫ್ (63ವ) ಗುರುವಾರ ನಿಗೂಢ ಕಾಯಿಲೆಯಿಂದ ನಿಧನರಾದರು. ಈ ಸಾವುಗಳು ಅಸ್ಲಾಂ ಅವರನ್ನು ಜರ್ಝರಿತವಾಗಿಸಿದೆ.
ಒಂದು ವಾರದಲ್ಲಿ ನನ್ನ ಇಡೀ ಪ್ರಪಂಚ ನಾಶವಾಗಿದೆ. ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐದು ಮಕ್ಕಳನ್ನು ನಾನು ಕಳೆದುಕೊಂಡಿದ್ದೇನೆ. ಈಗ ನನ್ನ ಏಕೈಕ ಪುತ್ರಿ ಯಾಸ್ಮಿನ್ ಕೌನ್ಸರ್ (15ವ) ಜಮ್ಮುವಿನ ಎಸ್ ಎಂಜಿಎಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಅಸ್ಲಾಂ ದುಃಖದಿಂದ ಹೇಳುತ್ತಾರೆ.
ಈಗಿರುವ ಮಗಳು ಬದುಕುಳಿಯುತ್ತಾಳೋ ಇಲ್ಲವೋ ಗೊತ್ತಿಲ್ಲ. ಆಕೆಯ ಜೀವವನ್ನು ಉಳಿಸಲು ನಾವು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳುತ್ತಾರೆ. ಯಾಸ್ಮಿನ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಡಿಸೆಂಬರ್ 7ರಂದು ಇವರ ಕುಟುಂಬದಲ್ಲಿ ಸಾವುಗಳು ಪ್ರಾರಂಭವಾದವು. ಡಿಸೆಂಬರ್ 7 ರಂದು, ಮೊಹಮ್ಮದ್ ಫಜಲ್ ಮತ್ತು ಅವರ ನಾಲ್ವರು ಮಕ್ಕಳು ಬುಧಾಲ್ ಗ್ರಾಮದಲ್ಲಿ ವಿಚಿತ್ರ ಕಾಯಿಲೆಯಿಂದ ಮೃತಪಟ್ಟಿದ್ದರು. ಸಮುದಾಯ ಕಾರ್ಯಕ್ರಮವೊಂದರಲ್ಲಿ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದರು. ಐದು ದಿನಗಳ ನಂತರ ಡಿಸೆಂಬರ್ 12ರಂದು ಮೊಹಮ್ಮದ್ ರಫೀಕ್ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ನಿಗೂಢ ಕಾಯಿಲೆಯಿಂದ ಕಳೆದುಕೊಂಡರು.
ಜನವರಿ 9 ರಂದು, ಅಸ್ಲಾಂ ಅವರ ಆರು ಮಕ್ಕಳು ಅನಾರೋಗ್ಯಕ್ಕೆ ಒಳಗಾದರು. ಅವರಲ್ಲಿ ಐದು ಮಂದಿ ಮೃತಪಟ್ಟರು. ಅವರೊಂದಿಗೆ ವಾಸಿಸುತ್ತಿದ್ದ ಅವರ ಮಾವ ಮತ್ತು ಅತ್ತೆ ಕೂಡ ಕಳೆದ ಎರಡು ದಿನಗಳಲ್ಲಿ ಮೃತಪಟ್ಟಿದ್ದಾರೆ. ಎಲ್ಲಾ ಮೂರು ಕುಟುಂಬಗಳು ಪರಸ್ಪರ ಸಂಬಂಧ ಹೊಂದಿದ್ದು 1.5 ಕಿಲೋಮೀಟರ್ ಒಳಗೆ ವಾಸಿಸುತ್ತವೆ.
ಡಿಸೆಂಬರ್ 7 ರಂದು ಫಜಲ್ ಅವರ ಮನೆಯಲ್ಲಿ ಸುಮಾರು 30-40 ಜನರು ಆಹಾರ ಸೇವಿಸಿದ್ದರು. ಕೇವಲ ಮೂರು ಕುಟುಂಬಗಳು ಮಾತ್ರ ಏಕೆ ಅಸ್ವಸ್ಥಗೊಂಡವು ಎಂದು ಅವರ ಸಂಶಯವಾಗಿದೆ. ನನ್ನ ಮೂವರು ಮಕ್ಕಳು ಮನೆಯಲ್ಲಿದ್ದರು, ಅವರು ಆಹಾರವನ್ನು ಸೇವಿಸಲಿಲ್ಲ, ಅದಾಗಿಯೂ ಅವರು ಬಾಧಿತರಾಗಿ ಬಲಿಯಾದರು. ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಸತ್ಯವನ್ನು ಬಹಿರಂಗಪಡಿಸಲು ಸರಿಯಾದ ವೈದ್ಯಕೀಯ ಮತ್ತು ಪೊಲೀಸ್ ತನಿಖೆ ನಡೆಸಬೇಕು ಎಂದು ಅಸ್ಲಾಂ ಹೇಳಿದರು.
ಈ ನಿಗೂಢ ಕಾಯಿಲೆ ಗ್ರಾಮದಲ್ಲಿ ಭೀತಿಯನ್ನುಂಟುಮಾಡಿದ್ದು ಗ್ರಾಮಸ್ಥರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಆತಂಕಗೊಂಡಿದ್ದಾರೆ.
ಗ್ರಾಮದಿಂದ ಸಾವಿರಾರು ಮಾದರಿಗಳನ್ನು ವಿವಿಧ ಸಂಸ್ಥೆಗಳು ಪರೀಕ್ಷೆಗೆ ತೆಗೆದುಕೊಂಡಿವೆ. ಎಲ್ಲಾ ಮಾದರಿಗಳನ್ನು ವೈರಲ್ ಅಥವಾ ಬ್ಯಾಕ್ಟೀರಿಯೊಲಾಜಿಕಲ್ ಎಟಿಯಾಲಜಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ದೇಶದ ಅತ್ಯಂತ ಪ್ರಸಿದ್ಧ ಪ್ರಯೋಗಾಲಯಗಳಲ್ಲಿ ವಿವಿಧ ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಕ್ಲಿನಿಕಲ್ ವರದಿಗಳು, ಪ್ರಯೋಗಾಲಯ ತನಿಖೆಗಳು ಮತ್ತು ಪರಿಸರ ಮಾದರಿಗಳು ಘಟನೆಗಳು ಸಾಂಕ್ರಾಮಿಕ ರೋಗದಿಂದ ಉಂಟಾಗಿಲ್ಲ ಎಂದು ಸೂಚಿಸಿವೆ. ಯಾವುದೇ ಸಾಂಕ್ರಾಮಿಕ ರೋಗವಿಲ್ಲ ಎಂದು ಸರ್ಕಾರ ಹೇಳಿದರೆ, ಅದು ಸಾವಿನ ಕಾರಣವನ್ನು ತನಿಖೆ ಮಾಡಬೇಕು ಎಂದು ಅಸ್ಲಾಂ ಒತ್ತಾಯಿಸಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸಬೇಕು. ಎಂದು ಅವರು ಸರ್ಕಾರ ಪ್ರಾರಂಭಿಸಿದ ಪೊಲೀಸ್ ತನಿಖೆಯನ್ನು ಉಲ್ಲೇಖಿಸಿ ಹೇಳಿದರು.
ಈ ಮಧ್ಯೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ಬುಧಾಲ್ ಗ್ರಾಮದ ಪರಿಸ್ಥಿತಿಯನ್ನು ಚರ್ಚಿಸಲು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
Advertisement