ಕೋಲ್ಕತ್ತಾ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: 57 ದಿನಗಳಲ್ಲೇ ತೀರ್ಪು ಪ್ರಕಟ; ಸಂಜಯ್ ರಾಯ್ ದೋಷಿ
ಕೋಲ್ಕತ್ತಾ: ದೇಶಾದ್ಯಂತ ಭಾರಿ ಆಕ್ರೋಶ ಮತ್ತು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.
ಕಳೆದ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿತ್ತು. ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು, ಕೇವಲ 57 ದಿನಗಳಲ್ಲೇ ಪ್ರಕರಣದ ತೀರ್ಪು ಪ್ರಕಟಿಸಿದ್ದು, ಆರೋಪಿ 33 ವರ್ಷದ ಸಂಜಯ್ ರಾಯ್ ದೋಷಿ ಎಂದು ಹೇಳಿದ್ದಾರೆ. ಆದರೆ ಶಿಕ್ಷೆಯ ಪ್ರಮಾಣವನ್ನು ಜನವರಿ 20 ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಆಸ್ಪತ್ರೆಯಲ್ಲಿ ನಾಗರಿಕ ಸ್ವಯಂಸೇವಕನಾಗಿದ್ದ ರಾಯ್ ನನ್ನು ಕೊಲೆಯ ಮರುದಿನ ಬಂಧಿಸಲಾಯಿತು ಮತ್ತು ಅಂದಿನಿಂದ ಜೈಲಿನಲ್ಲಿ ಇರಿಸಲಾಗಿದೆ. ತಪ್ಪಿತಸ್ಥ ರಾಯ್ ಗೆ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ನ್ಯಾಯಾಲಯವು ನವೆಂಬರ್ 11 ರಂದು ಪ್ರಕರಣದ ವಿಚಾರಣೆ ಆರಂಭಿಸಿದ್ದು, ಸುಮಾರು 50 ಸಾಕ್ಷಿಗಳಿಂದ ಸಾಕ್ಷ್ಯವನ್ನು ಆಲಿಸಿದೆ ಮತ್ತು ಕಳೆದ ಡಿಸೆಂಬರ್ 21 ರಂದು ರಾಯ್ ನಿಲುವನ್ನು ಪಡೆದುಕೊಳ್ಳಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ