
ನವದೆಹಲಿ: ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಬಳಿ ರೋಗಿಗಳು ಪರದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಅವರಿಗೆ ಪತ್ರ ಬರೆದ್ದಾರೆ.
ಏಮ್ಸ್‌ನ ಹೊರಗಿನ ಫುಟ್ ಪಾತ್ ಗಳಲ್ಲಿ ಮತ್ತು ಸಬ್‌ವೇಯಲ್ಲಿ ನೂರಾರು ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಕಾಯುತ್ತಿರುವ ದುಃಸ್ಥಿತಿಯನ್ನು ಕಂಡು, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವರಿಗೆ ಮತ್ತು ದೆಹಲಿ ಸಿಎಂಗೆ ಪತ್ರ ಬರೆದು, ಈ "ಮಾನವೀಯ ಬಿಕ್ಕಟ್ಟನ್ನು" ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಹೆಚ್ಚಿಸಲು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕರ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, "ದೇಶದಾದ್ಯಂತ ದೆಹಲಿ ಏಮ್ಸ್‌ಗೆ ಬರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಂತೆ ನಾನು ದೆಹಲಿ ಮುಖ್ಯಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ ಕೊರೆಯುವ ಚಳಿಯಲ್ಲಿ ಈ ಜನರು ಮೆಟ್ರೋ ನಿಲ್ದಾಣದ ಕೆಳಗೆ ಸಬ್‌ವೇಯಲ್ಲಿ ಮಲಗುತ್ತಿದ್ದಾರೆ. ಅಲ್ಲಿ ಕುಡಿಯುವ ನೀರು ಅಥವಾ ಶೌಚಾಲಯವಿಲ್ಲ. ಸುತ್ತಲೂ ಕಸದ ರಾಶಿ ಬಿದ್ದಿದೆ. ದೆಹಲಿ ಏಮ್ಸ್‌ಗೆ ಇಷ್ಟೊಂದು ಸಂಖ್ಯೆಯ ರೋಗಿಗಳು ಆಗಮಿಸುತ್ತಿರುವುದು ಜನ ತಾವು ವಾಸಿಸುವ ಸ್ಥಳಗಳಲ್ಲಿ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ನನ್ನ ಪತ್ರವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಮುಖ್ಯಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರು ಈ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ನಡ್ಡಾ ಅವರಿಗೆ ಬರೆದ ಪತ್ರದಲ್ಲಿ, ದೆಹಲಿಯ AllMS ಹೊರಗಿನ "ಸಂಕಟಕರ ಪರಿಸ್ಥಿತಿ"ಯನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇತ್ತೀಚೆಗೆ ಆ ಪ್ರದೇಶಕ್ಕೆ ಭೇಟಿ ನೀಡಿದಾಗ, ನೂರಾರು ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಕೊರೆಯುವ ಚಳಿಯಲ್ಲಿ ಕುಡಿಯುವ ನೀರು ಅಥವಾ ನೈರ್ಮಲ್ಯ ಸೌಲಭ್ಯಗಳಿಲ್ಲದೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದಾರೆ. ಫುಟ್‌ಪಾತ್ ಮತ್ತು ಸಬ್‌ವೇಯಲ್ಲಿರುವ ಅವರ ಸ್ಥಿತಿ ನೋಡಿ ದುಃಖವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Advertisement