
ಪಾಟ್ನಾ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷಕ್ಕೆ ನ್ಯಾಯಯುತ ಸ್ಥಾನಗಳು ಸಿಗದ ಕಾರಣ ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ(ಎಚ್‌ಎಎಂ) ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮಂಗಳವಾರ ಮುಂಗೇರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಂಝಿ ಈ ಹೇಳಿಕೆ ನೀಡಿದ್ದು, ಎನ್‌ಡಿಎಯಿಂದ ಎಚ್‌ಎಎಂ ನಿರ್ಲಕ್ಷ್ಯಕ್ಕೊಳಗಾಗಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿ ಮತ್ತು ಜಾರ್ಖಂಡ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಒಂದೇ ಒಂದು ಸ್ಥಾನ ನೀಡದ ವಿಚಾರವನ್ನೂ ಪ್ರಸ್ತಾಪಿಸಿದ ಮಾಂಝಿ, "ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಎಎಂ ವಕ್ತಾರ ಡ್ಯಾನಿಶ್ ರಿಜ್ವಾನ್ ಅವರು, ಜಿತನ್ ರಾಮ್ ಮಾಂಝಿ ಅವರ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿವೆ. ಅವರು ಹಾಗೆ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಂಝಿ ಅವರು ಇದಕ್ಕೂ ಮೊದಲು, ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು. "ನಮ್ಮ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನಗಳಿಗೆ ಸ್ಪರ್ಧಿಸಲು ಕೇಳುತ್ತಿದ್ದಾರೆ. ಆದರೆ ನಾವು ಕನಿಷ್ಠ 20 ಸ್ಥಾನಗಳಿಗೆ ಸ್ಪರ್ಧಿಸಬೇಕೆಂದು ಭಾವಿಸುತ್ತೇವೆ" ಎಂದು ಬಿಹಾರ ಮಾಜಿ ಸಿಎಂ ಹೇಳಿದ್ದರು.
ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಾಂಝಿ ಹೇಳಿಕೆಯಿಂದ ರಾಜಕೀಯ ಲಾಭ ಪಡೆಯಲು ಮಹಾಮೈತ್ರಿಕೂಟವು ತನ್ನ ಎಲ್ಲಾ ಪ್ರಯತ್ನಗಳನ್ನು ಪ್ರಾರಂಭಿಸಿದೆ.
Advertisement