
ಮುಂಬಯಿ: ರೈಲಿಗೆ ಬೆಂಕಿ ಬಿದ್ದಿದೆ ಎಂದು ಪುಷ್ಪಕ್ ಎಕ್ಸ್‌ಪ್ರೆಸ್‌ನೊಳಗೆ ಚಹಾ ಮಾರಾಟಗಾರನೊಬ್ಬ ಹಬ್ಬಿಸಿದ ವದಂತಿಯೇ ರೈಲು ಅಪಘಾತಕ್ಕೆ ಕಾರಣ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಬುಧವಾರ ಸಂಜೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಕ್ಕದ ಹಳಿಗಳ ಮೇಲೆ ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಪ್ಯಾಂಟ್ರಿಯ ಚಹಾ ಮಾರಾಟಗಾರನೊಬ್ಬ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದ್ದಾನೆ, ಉತ್ತರ ಪ್ರದೇಶದ ಶ್ರಾವಸ್ತಿಯ ಇಬ್ಬರು ಪ್ರಯಾಣಿಕರು ಅದನ್ನು ಕೇಳಿಸಿಕೊಂಡು ಇತರರಿಗೆ ಈ ವದಂತಿಯನ್ನು ಹಬ್ಬಿಸಿದ್ದಾರೆ. ಇದರಿಂದ ಕೆಲವು ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಹಾರಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
ಭಯಭೀತರಾದ ಕೆಲವು ಪ್ರಯಾಣಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರೈಲಿನಿಂದ ಎರಡೂ ಬದಿಗಳಿಂದ ಜಿಗಿದಿದ್ದಾರೆ. ರೈಲು ವೇಗವಾಗಿ ಚಲಿಸುತ್ತಿದ್ದಂತೆ, ಒಬ್ಬ ಪ್ರಯಾಣಿಕರು ಸರಪಳಿ ಎಳೆದಿದ್ದಾರೆ. ರೈಲು ನಿಂತ ನಂತರ, ಜನರು ಕೆಳಗೆ ಇಳಿಯಲು ಪ್ರಾರಂಭಿಸಿದರು, ಪಕ್ಕದ ಹಳಿಯಲ್ಲಿ ವೇಗವಾಗಿ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ ಎಂದು ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ. ಸಾವನ್ನಪ್ಪಿದ 13 ಜನರಲ್ಲಿ 10 ಜನರನ್ನು ಗುರುತಿಸಲಾಗಿದೆ. ವದಂತಿ ಹರಡಿದ ಇಬ್ಬರು ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.
Advertisement