
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಭೆಯಿಂದ ಪ್ರತಿಪಕ್ಷಗಳ ಎಲ್ಲಾ ಸಂಸದರನ್ನು ಶುಕ್ರವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ವಿರುದ್ಧ ನಿರಂತರ ಪ್ರತಿಭಟನೆ ಮತ್ತು ಗದ್ದಲದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಎಲ್ಲಾ 10 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಕಲ್ಯಾಣ್ ಬ್ಯಾನರ್ಜಿ, ಮೊಹಮ್ಮದ್ ಜಾವೇದ್, ಎ ರಾಜಾ, ಅಸಾದುದ್ದೀನ್ ಓವೈಸಿ, ನಾಸೀರ್ ಹುಸೇನ್, ಮೊಹಿಬುಲ್ಲಾ, ಮೊಹಮ್ಮದ್ ಅಬ್ದುಲ್ಲಾ, ಅರವಿಂದ್ ಸಾವಂತ್, ನದೀಮ್-ಉಲ್ ಹಕ್, ಇಮ್ರಾನ್ ಮಸೂದ್ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಿದರು ಮತ್ತು ಇದನ್ನು ಸಮಿತಿ ಅಂಗೀಕರಿಸಿತು.
ಬಿಜೆಪಿ ಸದಸ್ಯ ಅಪರಾಜಿತಾ ಸಾರಂಗಿ ಅವರು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ನಿರಂತರವಾಗಿ ಗದ್ದಲ ಸೃಷ್ಟಿಸುತ್ತಿದ್ದರು ಮತ್ತು ಪಾಲ್ ವಿರುದ್ಧ ಅಸಂಸದೀಯ ಭಾಷೆ ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಜಂಟಿ ಸಂಸದೀಯ ಸಮಿತಿ ಸಭೆಯು ತೀವ್ರ ಗದ್ದಲದಿಂದ ಕೂಡಿತ್ತು, ವಿರೋಧ ಪಕ್ಷದ ಸದಸ್ಯರು ಕರಡು ಮಸೂದೆಗೆ ಪ್ರಸ್ತಾವಿತ ಬದಲಾವಣೆಗಳನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯ ನೀಡಲಾಗಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ವಿರೋಧ ಪಕ್ಷದ ಸಂಸದರ ಧ್ವನಿಯನ್ನು ಕಡೆಗಣಿಸಿದ್ದಾರೆ. ಪಾಲ್ ಅವರು ಜಮೀನ್ದಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement