
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಅದರ ನಡುವೆ ಅಮುಲ್ ಪೈಪೋಟಿಗೆ ಇಳಿದಿದೆ. ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ದೇಶಾದ್ಯಂತ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಒಂದು ರೂಪಾಯಿ ಇಳಿಕೆ ಮಾಡಿದೆ.
ಇತ್ತೀಚಿಗೆ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಲ( KMF) ಮತ್ತು ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವತಿಯಿಂದ 'ನಂದಿನಿ' ವಿವಿಧ ಶ್ರೇಣಿಯ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಲಾಗಿತ್ತು. ಅಮುಲ್ ಹಾಗೂ ಮದರ್ ಡೇರಿ ಹಾಲಿಗಿಂತ ನಂದಿನ ಹಾಲಿನ ದರವನ್ನು ಕೆಎಂಎಫ್ ಸ್ವಲ್ಪ ಕಡಿಮೆ ಇರಿಸಿದೆ. ಆದಾಗ್ಯೂ ಅಮುಲ್ ಒಂದು ಲೀಟರ್ ಪ್ಯಾಕ್ ನ ಹಾಲಿನ ಬೆಲೆಯಲ್ಲಿ ಮಾತ್ರ ಕಡಿಮೆ ಮಾಡಿದೆ.
ದೇಶಾದ್ಯಂತ ಒಂದು ಲೀಟರ್ ಪ್ಯಾಕ್‌ಗಳ ಬೆಲೆಯನ್ನು1 ರೂಪಾಯಿ ಕಡಿಮೆ ಮಾಡಿದ್ದೇವೆ. ಇದು ಗ್ರಾಹಕರನ್ನು ದೊಡ್ಡ ಪ್ಯಾಕ್‌ಗಳ ಹಾಲು ಖರೀದಿಸಲು ಉತ್ತೇಜಿಸುತ್ತದೆ ಎಂದು GCMMF ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.
ದೆಹಲಿಯಲ್ಲಿ, ಅಮುಲ್ ಗೋಲ್ಡ್ ಹಾಲಿನ ದರವನ್ನು ಲೀಟರ್‌ಗೆ ರೂ 68 ರಿಂದ ರೂ 67 ಕ್ಕೆ ಇಳಿಸಲಾಗಿದ್ದು, ಅಮುಲ್ ತಾಜಾ ಹಾಲಿನ ಬೆಲೆ ಲೀಟರ್‌ಗೆ ರೂ. 56 ರಿಂದ ರೂ 55 ಆಗಿರುತ್ತದೆ. 2023 ರಲ್ಲಿ ಜಿಸಿಎಂಎಂಎಫ್ ವಹಿವಾಟು ಶೇ 8 ರಷ್ಟು ಏರಿಕೆಯಾಗಿ ರೂ 59,445 ಕೋಟಿ ಆಗಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಈ ಹಣಕಾಸು ವರ್ಷದಲ್ಲಿ ಸಹಕಾರಿ ಆದಾಯದಲ್ಲಿ ಎರಡಂಕಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಮೆಹ್ತಾ ಈ ಹಿಂದೆ ಹೇಳಿದ್ದರು.
GCMMF ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ ದಿನಕ್ಕೆ 310 ಲಕ್ಷ ಲೀಟರ್ ಹಾಲು ಮಾರಾಟ ಮಾಡಿದೆ. ಇದು ವಾರ್ಷಿಕವಾಗಿ ಒಟ್ಟು ಸುಮಾರು 500 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.
GCMMF ಗುಜರಾತ್‌ನ 18,600 ಹಳ್ಳಿಗಳಲ್ಲಿ 36 ಲಕ್ಷ ರೈತರನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೈತ-ಮಾಲೀಕತ್ವದ ಡೈರಿ ಸಹಕಾರಿಯಾಗಿದೆ ಮತ್ತು ಅದರ 18 ಸದಸ್ಯ ಒಕ್ಕೂಟಗಳು ದಿನಕ್ಕೆ 300 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತವೆ.
Advertisement