
ಮಹೇಶ್ವರ: ದೇವಿ ಅಹಲ್ಯಾಬಾಯಿಯವರ 300ನೇ ಜನ್ಮ ದಿನಾಚರಣೆ ಅಂಗವಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶುಕ್ರವಾರ ಖಾರ್ಗೋನ್ ಜಿಲ್ಲೆಯ ದೇವಿ ಅಹಲ್ಯಾಬಾಯಿ ನಗರ ಎಂದು ಕರೆಯಲ್ಪಡುವ ಮಹೇಶ್ವರದಲ್ಲಿ ಸಚಿವ ಸಂಪುಟ ಸಭೆ ನಡೆಸಿದರು ಮತ್ತು ರಾಜ್ಯಾದ್ಯಂತ ಧಾರ್ಮಿಕ ನಗರಗಳಲ್ಲಿ ಮದ್ಯ ನಿಷೇಧಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಾದವ್, ಮಧ್ಯ ಪ್ರದೇಶದ 17 ಧಾರ್ಮಿಕ ನಗರಗಳಲ್ಲಿ ಮದ್ಯ ನಿಷೇಧ ಹೇರಲು ಸಂಪುಟ ನಿರ್ಧರಿಸಿದೆ ಎಂದರು.
ಈ 17 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು ಮತ್ತು ಅವುಗಳನ್ನುಇತರ ಕಡೆ ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
"ರಾಜ್ಯ ಕ್ರಮೇಣ ಮದ್ಯ ನಿಷೇಧದತ್ತ ಸಾಗುವುದನ್ನು ಖಚಿತಪಡಿಸಿಕೊಳ್ಳಲು, ಮೊದಲ ಹಂತದಲ್ಲಿ ರಾಜ್ಯದ 17 ನಗರಗಳ ನಗರ ಪಾಲಿಕೆ, ನಗರ ಪರಿಷತ್, ನಗರ ಪಂಚಾಯತ್‌ಗಳಲ್ಲಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದಿಲ್ಲ. ಈ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ" ಎಂದು ಸಿಎಂ ಹೇಳಿದರು.
ಮದ್ಯದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲಾಗುವ 17 ನಗರಗಳಲ್ಲಿ ಒಂದು ಪುರಸಭೆ, ಆರು ನಗರ ಪಾಲಿಕೆ, ಆರು ನಗರ ಪರಿಷತ್ ಮತ್ತು ಆರು ಗ್ರಾಮ ಪಂಚಾಯತ್‌ಗಳು ಸೇರಿವೆ.
ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಅದೇ ರೀತಿ ದಾತಿಯಾ ನಗರ ಪಾಲಿಕೆ, ಪನ್ನಾ ನಗರ ಪಾಲಿಕೆ, ಮಂಡ್ಲಾ ನಗರ ಪಾಲಿಕೆ, ಮುಲ್ತಾಯಿ ನಗರ ಪಾಲಿಕೆ, ಮಂಡಸೌರ್ ನಗರ ಪಾಲಿಕೆ ಮತ್ತು ಮೈಹರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯವನ್ನು ನಿಷೇಧಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
Advertisement