
ಭಂಡಾರಾ: ರಕ್ಷಣಾ ಇಲಾಖೆಗೆ ಸಣ್ಣ ಪ್ರಮಾಣದ ಶಸ್ತಾಸ್ತ್ರಗಳನ್ನು ತಯಾರಿಸುವ ಮಹಾರಾಷ್ಟ್ರದ ಭಂದಾರಾ ಜಿಲ್ಲೆಯ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು 8 ಜನ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಿಗ್ಗೆ ಜವಾಹರ್ ನಗರದಲ್ಲಿನ ರಕ್ಷಣಾ ಇಲಾಖೆ ಕಾರ್ಖಾನೆಯ ಘಟಕವೊಂದರ ಮಾಳಿಗೆ ಕಳಚಿ ಬಿದ್ದಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೊಟ್ಲೆ ತಿಳಿಸಿದ್ದಾರೆ.
ಅವಶೇಷಗಳ ಅಡಿ ಇನ್ನೂ 7 ಜನ ಸಿಲುಕಿದ್ದಾರೆ. ಅವರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾರ್ಖಾನೆ ಆವರಣದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ. ಮೇಲ್ಛಾವಣಿ ಕುಸಿದಿದ್ದು, ಅವಶೇಷಗಳನ್ನು ತೆಗೆಯಲು ಅಗೆಯುವ ಯಂತ್ರವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಜವಾಹರ್ ನಗರ ಪ್ರದೇಶದಲ್ಲಿರುವ ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದ ಸಮಯದಲ್ಲಿ ವಿಭಾಗದಲ್ಲಿ 14 ನೌಕರರು ಕೆಲಸ ಮಾಡುತ್ತಿದ್ದರು, ಅವರಲ್ಲಿ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ ಮತ್ತು ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಪಾರುಗಾಣಿಕಾ ಮತ್ತು ವೈದ್ಯಕೀಯ ಸಿಬ್ಬಂದಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಸ್ಫೋಟದ ತೀವ್ರತೆ ಎಷ್ಟು ಇತ್ತೆಂದರೆ ಸುಮಾರು 5 ಕಿಮೀ ದೂರದ ವರೆಗೆ ಶಬ್ದ ಕೇಳಿಸಿತು. ಫ್ಯಾಕ್ಟರಿಯಿಂದ ದಟ್ಟ ಹೊಗೆ ಏಳುತ್ತಿರುವುದು ದೂರದಿಂದ ಸೆರೆ ಹಿಡಿದಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
Advertisement