
ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ತೂಗುದೀಪ, ಎ1 ಆರೋಪಿ ಪವಿತ್ರಾ ಗೌಡ ಮತ್ತು ಇತರ ಐದು ಜನರಿಗೆ ನೀಡಲಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಆದರೆ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಜಾಮೀನು ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ದರ್ಶನ್ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರವು ಆರೋಪಿಗಳಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿಕೊಂಡಿರುವುದರಿಂದ ಆದೇಶದ ಕಾರ್ಯಾಚರಣೆಗೆ ತಡೆ ನೀಡುವುದು ಸೂಕ್ತವಲ್ಲ ಏಕೆಂದರೆ ಅದು ಜಾಮೀನು ರದ್ದತಿಗೆ ಸಮನಾಗಿರುತ್ತದೆ. ಆದರೆ, ಪ್ರಾಸಿಕ್ಯೂಷನ್ ನ ಹಿತಾಸಕ್ತಿ ರಕ್ಷಣೆಗೆ ಸಹ ಆರೋಪಿಗಳು ಜಾಮೀನಿನ ಮೇಲೆ ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ನ್ಯಾಯಾಲಯವು ನಮ್ಮ ಮುಂದೆ ಪ್ರಶ್ನಿಸಲಾದ ಆದೇಶವನ್ನು ಅವಲಂಬಿಸಬಾರದು. ಸಲ್ಲಿಸಿದ ಯಾವುದೇ ಜಾಮೀನು ಅರ್ಜಿಯನ್ನು ಅದರ ಅರ್ಹತೆಯ ಮೇಲೆಯೇ ನಿರ್ಧರಿಸಲಾಗುತ್ತದೆ ಎಂದು ಪೀಠ ಹೇಳಿದೆ.
ಕೊಲೆ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 11ರಂದು ಬಂಧಿತರಾಗಿದ್ದ ನಟ ದರ್ಶನ್ ಸೇರಿ ಇತರ ಆರೋಪಿಗಳಿಗೆ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್ 13ರಂದು ಜಾಮೀನು ನೀಡಿತ್ತು.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬ ಸಿಟ್ಟಿನಲ್ಲಿ ಕಳೆದ ವರ್ಷ ಜೂನ್ 8 ರಂದು ತನ್ನ ಅಭಿಮಾನಿ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಕೊಂದ ಆರೋಪದ ಮೇಲೆ ದರ್ಶನ್ ಅವರನ್ನು ಬಂಧಿಸಲಾಗಿತ್ತು. 33 ವರ್ಷದ ರೇಣುಕಸ್ವಾಮಿ ಮೃತದೇಹ ಕಳೆದ ವರ್ಷ ಜೂನ್ 9ರಂದು ಬೆಂಗಳೂರಿನ ಮೋರಿಯೊಂದರಲ್ಲಿ ಪತ್ತೆಯಾಗಿತ್ತು.
ಜಾಮೀನು ಮಂಜೂರು ಮಾಡುವ ಮೊದಲು, ದರ್ಶನ್ ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಜೈಲಿನ ನಿಯಮ ಮೀರಿ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಆದ ನಂತರ ಬಳ್ಳಾರಿ ಕೇಂದ್ರ ಜೈಲಿಗೆ ವರ್ಗಾಯಿಸಲಾಯಿತು.
ದರ್ಶನ್ ಸೇರಿ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದರ ವಿರುದ್ಧ ರಾಜ್ಯ ಸರ್ಕಾರ ಜನವರಿ 6 ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ರೇಣುಕಸ್ವಾಮಿಯನ್ನು ಅಪಹರಿಸಿ ಆತನಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿ ದರ್ಶನ್ ಸೂಚನೆ ಮೇರೆಗೆ ಇತರರು ಹತ್ಯೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಕೂಡ ಹಲ್ಲೆ ನಡೆಸಿರುವ ಆರೋಪವಿದೆ.
ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್ 30ರಂದು ದರ್ಶನ್ ಗೆ ತೀವ್ರ ಬೆನ್ನುನೋವು ಇದೆ ಎಂಬ ಕಾರಣಕ್ಕೆ ವೈದ್ಯಕೀಯ ಆಧಾರದ ಮೇಲೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತು. ನಂತರ ಡಿಸೆಂಬರ್‌ನಲ್ಲಿ ಅವರಿಗೆ ಮತ್ತು ಇತರರಿಗೆ ನಿಯಮಿತ ಜಾಮೀನು ನೀಡಲಾಯಿತು.
Advertisement