ಹಿಂದೂ-ಮುಸ್ಲಿಮರೆಂದು ವಿಭಜನೆ ಮಾಡುವವರು ನಿಜವಾದ ಹಿಂದೂಗಳಲ್ಲ: ಉದ್ಧವ್ ಠಾಕ್ರೆ
ಮುಂಬೈ: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ವವ್ ಠಾಕ್ರೆ ಭಾರತೀಯ ಜನತಾ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿ, ಕೋಮು ಸೌಹಾರ್ದತೆಯನ್ನು ಕೆಡಿಸುವ ಯಾರಾದರೂ "ಹಿಂದೂ ಆಗಲು ಸಾಧ್ಯವಿಲ್ಲ" ಎಂದು ಹೇಳುವುದರ ಜೊತೆಗೆ ತಮ್ಮ ಪಕ್ಷದ ಹಿಂದುತ್ವ ಶುದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತಪತ್ರಗಳ ಮೇಲೆ ಚುನಾವಣೆ ನಡೆಸುವ ಬಗ್ಗೆಯೂ ಸವಾಲು ಹಾಕಿದರು. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಿಮಗೆ ನಾಚಿಕೆ ಇದ್ದರೆ, ಇವಿಎಂಗಳನ್ನು ಪಕ್ಕಕ್ಕೆ ಇರಿಸಿ ಮತಪತ್ರಗಳನ್ನು ಬಳಸಿ ಚುನಾವಣೆಗಳನ್ನು ನಡೆಸಿ. ಹಿಂದೂ-ಮುಸ್ಲಿಂ ದ್ವೇಷವನ್ನು ಹರಡುವ ಯಾರಾದರೂ ಹಿಂದೂ ಆಗಲು ಸಾಧ್ಯವಿಲ್ಲ. ನಮ್ಮ ಹಿಂದುತ್ವ ಶುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಶಿವಸೇನೆ (ಯುಬಿಟಿ) ಗೆ ಭಾರಿ ಸೋಲುಂಟು ಮಾಡಿ ಬಿಜೆಪಿ ನೇತೃತ್ವದ ಮಹಾಯುತಿ 235 ಸ್ಥಾನಗಳೊಂದಿಗೆ ಭರ್ಜರಿ ಜಯ ಸಾಧಿಸಿತು.
ಈ ಮಧ್ಯೆ, ಇಂಡಿಯಾ ಒಕ್ಕೂಟದ ಹಲವಾರು ವಿರೋಧ ಪಕ್ಷದ ನಾಯಕರು ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) 'ನ್ಯಾಯಯುತತೆ'ಯನ್ನು ಪ್ರಶ್ನಿಸುತ್ತಿದ್ದು, ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆಗಳನ್ನು ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತದಾನಕ್ಕಾಗಿ ಕಾಗದದ ಮತಪತ್ರಗಳಿಗೆ ಮರಳುವ ವಿಚಾರವನ್ನು ತಳ್ಳಿಹಾಕಿದ್ದಾರೆ. ಕಾಗದ ಮತಪತ್ರ ವ್ಯವಸ್ಥೆಗೆ ಮರಳುವುದು ಅನಗತ್ಯ ಮತ್ತು ಪ್ರತಿಗಾಮಿ. ಇದು ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದರು.
ಈ ವಾರ, ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಕ್ಷೇತ್ರಗಳಾದ್ಯಂತ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಜಾಗೊಳಿಸಿತು. ಅರ್ಜಿದಾರರು ಇವಿಎಂಗಳ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಸಂಬಂಧಿತ ಕಾನೂನಿನ ಸೆಕ್ಷನ್ 61-ಎ ಪ್ರತಿ ಕ್ಷೇತ್ರದಲ್ಲಿ ಇವಿಎಂಗಳ ಬಳಕೆಗೆ ಪ್ರತಿವಾದಿಯು (ಭಾರತ ಚುನಾವಣಾ ಆಯೋಗ) ನಿರ್ದಿಷ್ಟ ಸಮರ್ಥನೆಗಳನ್ನು ಒದಗಿಸಬೇಕಾಗುತ್ತದೆ ಎಂದು ವಾದಿಸಿದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ಪೀಠವು, ಪ್ರಸ್ತುತ ಮೇಲ್ಮನವಿಯಲ್ಲಿ ನಮಗೆ ಯಾವುದೇ ಅರ್ಹತೆ ಕಂಡುಬಂದಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತು.