
ಬನಾರಸ್: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶುಕ್ರವಾರ ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ಗೆ ಭೇಟಿ ನೀಡಿದರು.
ಈ ವೇಳೆ ಅವರು ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು.
ಕಾರ್ಯಾಗಾರ (ವರ್ಕ್ ಶಾಪ್) ವೀಕ್ಷಣೆ ವೇಳೆ, ಹೊಸ ಲೋಕೋ ಫ್ರೇಮ್ ಶಾಪ್, ಲೋಕೋ ಅಸೆಂಬ್ಲಿ ಶಾಪ್, ಟ್ರಾಕ್ಷನ್ ಅಸೆಂಬ್ಲಿ ಶಾಪ್, ಟ್ರಕ್ ಮಷೀನ್ ಶಾಪ್ ಮತ್ತು ಲೋಕೋ ಟೆಸ್ಟ್ ಶಾಪ್ ,ಎಲೆಕ್ಟ್ರಿಕ್ ಇಂಜಿನ್ ಅನ್ನು ಪರೀಕ್ಷಿಸಿದರು.
ಅಲ್ಲದೇ ಚಾಲಕರ ಆಸನದಲ್ಲಿ ಕುಳಿತು ಅದರ ತಾಂತ್ರಿಕ ಲಕ್ಷಣಗಳ ಅನುಭವ ಪಡೆದರು. ವರ್ಕ್ ಶಾಪ್ ಭೇಟಿ ಬಳಿಕ ಆಡಳಿತ ಭವನದ ಆವರಣದಲ್ಲಿ ಸಸಿ ನೆಟ್ಟು ಹಸಿರು ಪರಿಸರದ ಸಂದೇಶ ಸಾರಿದರು.
ನಂತರ ಮಾತನಾಡಿದ ವಿ.ಸೋಮಣ್ಣ, ಬಿ ಎಲ್ ಡಬ್ಲ್ಯು ನ ಉತ್ಪಾದನಾ ವ್ಯವಸ್ಥೆಯು ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ. ಬಿ ಎಲ್ ಡಬ್ಲ್ಯು, ಆತ್ಮನಿರ್ಭರ ಭಾರತ ಅಭಿಯಾನದ ಪ್ರಮುಖ ಆಧಾರಸ್ತಂಭವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬದ್ಧತೆ ಮತ್ತು ಪರಿಶ್ರಮ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಡುತ್ತಿದೆ. ಮೊಜಾಂಬಿಕ್, ಸುಡಾನ್, ಮಲೇಷ್ಯಾ ಸೇರಿದಂತೆ 11 ದೇಶಗಳಿಗೆ ಇಂಜಿನ್‌ಗಳನ್ನು ಯಶಸ್ವಿ ರಫ್ತನ್ನು ಮಾಡುತ್ತಿದೆ. ಇದು ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮದತ್ತ ಮಹತ್ವದ ಹೆಜ್ಜೆ ಎಂದು ವಿವರಿಸಿದರು.
"ಬಿ ಎಲ್ ಡಬ್ಲ್ಯು ಭಾರತೀಯ ರೈಲ್ವೆಯ ಪ್ರಮುಖ ಎಂಜಿನ್ ಉತ್ಪಾದನಾ ಘಟಕವಾಗಿದ್ದು, ಇಲ್ಲಿಯವರೆಗೆ 10,500 ಎಂಜಿನ್ ಗಳನ್ನು ತಯಾರಿಸಲಾಗಿದ್ದು, ಭಾರತೀಯ ರೈಲ್ವೆಯನ್ನು ಶ್ರೇಷ್ಠತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗಿದೆ" ಎಂದು ಪ್ರಧಾನ ವ್ಯವಸ್ಥಾಪಕ ನರೇಶ್ ಪಾಲ್ ಸಿಂಗ್ ಹೇಳಿದರು. ಸಚಿವರ ಪ್ರೇರಣಾದಾಯಕ ಭೇಟಿಯು ಬಿ ಎಲ್ ಡಬ್ಲ್ಯು ಗೆ ನವೀಕೃತ ಶಕ್ತಿಯ ಸೆಲೆಯಾಗಿದೆ ಎಂದು ಅವರು ಬಣ್ಣಿಸಿದರು.
Advertisement