
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಎರಡು ವಾರಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ, ಬಿಜೆಪಿ ಶನಿವಾರ ಮತ್ತೊಂದು ಪ್ರಣಾಳಿಕೆ ಬಿಡುಗೆಡ ಮಾಡಿದ್ದು, ಮೂರು ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ದೆಹಲಿ ಚುನಾವಣೆಗಾಗಿ ಬಿಜೆಪಿಯ 'ಸಂಕಲ್ಪ ಪತ್ರ' ಪ್ರಣಾಳಿಕೆಯ ಅಂತಿಮ ಭಾಗವನ್ನು ಇಂದು ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮೂರು ವರ್ಷಗಳಲ್ಲಿ ಯಮುನಾ ನದಿ ಸ್ವಚ್ಛಗೊಳಿಸುವುದಾಗಿ ಹಾಗೂ ಅಕ್ರಮ ಕಾಲೋನಿಗಳಲ್ಲಿ ವಾಸಿಸುತ್ತಿರುವ 1700ಕ್ಕೂ ಹೆಚ್ಚು ಜನರಿಗೆ ಸಂಪೂರ್ಣ ಹಕ್ಕುಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದರು.
ಇದೇ ವೇಳೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಕೇಜ್ರಿವಾಲ್ "ಸುಳ್ಳು" ಹೇಳುತ್ತಿದ್ದಾರೆ ಮತ್ತು ಅವರು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ಅರವಿಂದ್ ಕೇಜ್ರಿವಾಲ್ ಅವರಂತಹ ಸುಳ್ಳುಗಾರನನ್ನು ನನ್ನ ಜೀವನದಲ್ಲಿಯೇ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇಂದು ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆಯು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಯೋಜನೆಯಡಿ ದೆಹಲಿ ಮೆಟ್ರೋದಲ್ಲಿ ನಿರ್ಗತಿಕ ವಿದ್ಯಾರ್ಥಿಗಳಿಗೆ ವಾರ್ಷಿಕ 4,000 ರೂ.ಗಳವರೆಗೆ ಉಚಿತ ಪ್ರಯಾಣದ ಭರವಸೆ ನೀಡಿದೆ.
ದೆಹಲಿಯಲ್ಲಿ ಬಡವರಿಗಾಗಿ ಜಾರಿಯಲ್ಲಿರುವ ಯಾವುದೇ ಕಲ್ಯಾಣ ಯೋಜನೆಗಳನ್ನು ಬಿಜೆಪಿ ನಿಲ್ಲಿಸುವುದಿಲ್ಲ ಎಂದು ಅಮಿತ್ ಶಾ ಪುನರುಚ್ಚರಿಸಿದರು.
ಬಿಜೆಪಿ ನಾಯಕರು, ಗಿಗ್ ಕಾರ್ಮಿಕರು ಮತ್ತು ಕಾರ್ಮಿಕರಿಗೆ ವಿವಿಧ ಹೊಸ ಯೋಜನೆಗಳು ಮತ್ತು ಕಲ್ಯಾಣ ಕ್ರಮಗಳ ಭರವಸೆ ನೀಡಿದರು.
ಬಿಜೆಪಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸುತ್ತದೆ ಮತ್ತು ರೂ. 10 ಲಕ್ಷ ವಿಮೆ ಮತ್ತು ರೂ. 5 ಲಕ್ಷ ರೂ. ಅಪಘಾತ ವಿಮೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
50,000 ಸರ್ಕಾರಿ ಹುದ್ದೆಗಳನ್ನು ಪಾರದರ್ಶಕ ರೀತಿಯಲ್ಲಿ ಭರ್ತಿ ಮಾಡುವುದಾಗಿ, 20 ಲಕ್ಷ ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ಮತ್ತು ಭವ್ಯ ಮಹಾಭಾರತ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದಾಗಿಯೂ ಅಮಿತ್ ಶಾ ಭರವಸೆ ನೀಡಿದರು.
Advertisement