ಭಾರತದ ಮೊದಲ ಕೊರೊನರಿ ಆರ್ಟರಿ ಸರ್ಜರಿಯ ಪ್ರವರ್ತಕ, ಖ್ಯಾತ ಹೃದ್ರೋಗ ತಜ್ಞ ಡಾ. ಕೆ.ಎಂ ಚೆರಿಯನ್ ನಿಧನ
ಬೆಂಗಳೂರು: ಖ್ಯಾತ ಹೃದ್ರೋಗ ತಜ್ಞ, ದೇಶದ ಮೊದಲ ಯಶಸ್ವಿ ಪರಿಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಮೊದಲ ಹೃದಯ ಶ್ವಾಸಕೋಶ ಕಸಿಗೆ ಹೆಸರುವಾಸಿಯಾದ ಪ್ರಖ್ಯಾತ ಶಸ್ತ್ರಚಿಕಿತ್ಸಕ ಡಾ. ಕೆ. ಎಂ. ಚೆರಿಯನ್ ಬೆಂಗಳೂರಿನಲ್ಲಿ ಇಂದು ಭಾನುವಾರ ನಿಧನರಾಗಿದ್ದಾರೆ.
ಡಾ. ಚೆರಿಯನ್ ಫ್ರಾಂಟಿಯರ್ ಲೈಫ್‌ಲೈನ್ ಮತ್ತು ಡಾ. ಚೆರಿಯನ್ ಹಾರ್ಟ್ ಫೌಂಡೇಶನ್ ನ್ನು ಸ್ಥಾಪಿಸಿದರು. ಅವರು 1991 ರಲ್ಲಿ ಪದ್ಮಶ್ರೀ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1975 ರಲ್ಲಿ ಚೆನ್ನೈನ ಪೆರಂಬೂರಿನ ದಕ್ಷಿಣ ರೈಲ್ವೆ ಪ್ರಧಾನ ಕಚೇರಿ ಆಸ್ಪತ್ರೆಯಲ್ಲಿ ಭಾರತದ ಮೊದಲ ಯಶಸ್ವಿ ಪರಿಧಮನಿ ಅಪಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದರು. ಮೊದಲ ಹೃದಯ-ಶ್ವಾಸಕೋಶ ಕಸಿ, ಮೊದಲ ಮಕ್ಕಳ ಕಸಿ ಚಿಕಿತ್ಸೆಯನ್ನೂ ಮಾಡಿದ್ದರು.
ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ನಿನ್ನೆ ಸಾಯಂಕಾಲ ಭಾಗವಹಿಸಿದ್ದ ಚೆರಿಯನ್ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11.55 ಕ್ಕೆ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಸಂಧ್ಯಾ ಚೆರಿಯನ್ ತಿಳಿಸಿದ್ದಾರೆ.
ಫೋರ್ಟಿಸ್‌ನ ಕಾರ್ಡಿಯೋಥೊರಾಸಿಕ್ ಸರ್ಜರಿಯ ಅಧ್ಯಕ್ಷ ಡಾ. ವಿವೇಕ್ ಜವಲಿ ಅವರು ಶ್ರದ್ಧಾಂಜಲಿ ಸಲ್ಲಿಸಿ, ಹೃದಯ ಶಸ್ತ್ರಚಿಕಿತ್ಸೆಯ ದಿಗ್ಗಜ ಮತ್ತು ಸ್ವತಃ ಒಂದು ಸಂಸ್ಥೆಯಂತಿದ್ದ ಡಾ. ಕೆ. ಎಂ. ಚೆರಿಯನ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹೃದಯ ಶಸ್ತ್ರಚಿಕಿತ್ಸಾ ಲೋಕದ ವೈದ್ಯರು ಅವರನ್ನು ಗೌರವದಿಂದ ಕಾಣುತ್ತಿದ್ದೆವು ಎಂದು ಹೇಳಿದ್ದಾರೆ.