
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಈ ಹಿಂದೆ ಮುಂಬೈನಲ್ಲಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶದ ಪ್ರಜೆ ಬಳಸಿದ ಸಿಮ್ ಮಹಿಳೆಯ ಹೆಸರಿನಲ್ಲಿ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಮುಂಬೈ ಪೊಲೀಸರ ಇಬ್ಬರು ಸದಸ್ಯರ ತಂಡ ಮಹಿಳೆಯೊಬ್ಬರನ್ನು ನಾಡಿಯಾ ಜಿಲ್ಲೆಯ ಚಾಪ್ರಾದಿಂದ ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಮುಂಬೈಗೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಪಶ್ಚಿಮ ಬಂಗಾಳ ಪೊಲೀಸ್ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಬಂಧಿತ ಮಹಿಳೆಯನ್ನು ಖುಖುಮೋನಿ ಜಹಾಂಗೀರ್ ಶೇಖ್ ಎಂದು ಗುರುತಿಸಲಾಗಿದೆ. ಈಕೆ ಬಾಂಗ್ಲಾದೇಶಿ ಶರೀಫುಲ್ ಫಕೀರ್‌ಗೆ ಪರಿಚಿತರಾಗಿದ್ದರು ಎನ್ನಲಾಗಿದೆ.
ಭಾರತ- ಬಾಂಗ್ಲಾದೇಶ ಗಡಿ ಮೂಲಕ ಉತ್ತರ ಬಂಗಾಳದ ಸಿಲಿಗುರಿಯ ಬಳಿ ಅಕ್ರಮವಾಗಿ ದೇಶ ಪ್ರವೇಶಿಸಿದ್ದ ಫಕೀರ್ ಈ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ. ಮಹಿಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಆಂಡುಲಿಯಾ ನಿವಾಸಿ ಎಂದು ಮೂಲಗಳು ಹೇಳಿವೆ.
ಜನವರಿ 16 ರ ಮುಂಜಾನೆ, ಮುಂಬೈನ ಬಾಂದ್ರಾ ನಿವಾಸದಲ್ಲಿ ಸೈಫ್ ಅಲಿ ಖಾನ್ ಖಾನ್ ಆರು ಬಾರಿ ಚಾಕು ಇರಿತಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಪಡೆದಿದ್ದರು. ಜನವರಿ 21 ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು.
Advertisement