
ಚೆನ್ನೈ: ಉದ್ಯೋಗ ಸೃಷ್ಟಿಯಲ್ಲಿ ನೀತಿ ನಿರೂಪಣೆಗಿಂತ ಕೌಶಲ್ಯ ಅಭಿವೃದ್ಧಿ ಹೆಚ್ಚು ಮುಖ್ಯ ಎಂದು ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಚೆನ್ನೈನಲ್ಲಿ ನಡೆದ ಥಿಂಕ್‌ಎಡು ಕಾನ್ಕ್ಲೇವ್ 2025ರ 13ನೇ ಆವೃತ್ತಿಯಲ್ಲಿ ಮಾತನಾಡಿದ ಖರ್ಗೆ, ಉದ್ಯೋಗ ಸೃಷ್ಟಿಗೆ ಉತ್ತಮ ನೀತಿಗಳು ಮಾತ್ರ ಸಾಕಾಗುವುದಿಲ್ಲ, ಉದ್ಯೋಗ ಸೃಷ್ಟಿಗೆ ಅನುಕೂಲಕರ ವಾತಾವರಣ ಅಗತ್ಯ ಇದೆ ಎಂದರು.
ಕರ್ನಾಟಕದಲ್ಲಿ ಕಳೆದ 18 ತಿಂಗಳುಗಳಲ್ಲಿ ಉದ್ಯೋಗ ಸೃಷ್ಟಿಯ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಅವರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ರಾಜ್ಯ ಸರ್ಕಾರದ ವಿಧಾನವನ್ನು ಎತ್ತಿ ತೋರಿಸಿದರು: "ನಮ್ಮ ಕಲ್ಪನೆ ತುಂಬಾ ಸ್ಪಷ್ಟವಾಗಿದೆ - ಸ್ಥಳೀಯವಾಗಿ ಕೌಶಲ್ಯ ಮತ್ತು ಜಾಗತಿಕವಾಗಿ ಕೆಲಸ ಮಾಡಿ" ಎಂದರು.
ಇದೇ ವೇಳೆ ಅಮೆರಿಕ ಅಧ್ಯಕ್ಷರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಖರ್ಗೆ, ಸಮರ್ಥ ವ್ಯಕ್ತಿಗಳಿಗೆ ಮಾತ್ರ ತಮ್ಮ ದೇಶ ಪ್ರವೇಶಿಸುವುದಕ್ಕೆ ವೀಸಾ ನೀಡಲಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದರು.
ಕರ್ನಾಟಕ ಸರ್ಕಾರ ಪ್ರಮುಖವಾಗಿ ಮೂರು ಭರವಸೆಗಳ ಮೇಲೆ ಕೆಲಸ ಮಾಡುತ್ತಿದೆ. ಮೊದಲನೆಯದಾಗಿ, ತಮ್ಮ ಇಲಾಖೆಯು ಸುಮಾರು 1,400 ಹುದ್ದೆಗಳ ಭರ್ತಿ ಸೇರಿದಂತೆ ಭರವಸೆ ನೀಡಿದ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು. ಎರಡನೆಯದಾಗಿ, ಪದವಿ ಪಡೆದ ನಂತರ ಯುವಜನರಿಗೆ ಸಹಾಯ ಮಾಡುವುದು. ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೊಮಾ ಪಡೆದವರಿಗೆ 1,500 ಆರ್ಥಿಕ ಪ್ರೋತ್ಸಾಹವನ್ನು ನೀಡುವುದು; ಮತ್ತು ಮೂರನೆಯದಾಗಿ, ಉದ್ಯೋಗಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು.
ಉದಯೋನ್ಮುಖ ತಂತ್ರಜ್ಞಾನಿಗಳಿಗಾಗಿ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆಯನ್ನು ಉಲ್ಲೇಖಿಸಿದ ಖರ್ಗೆ, ಇದು ವಿಶ್ವದ ಅತಿದೊಡ್ಡ ಕೌಶಲ್ಯ ಅಭಿವೃದ್ಧಿಯ ಉಪಕ್ರಮ ಎಂದು ಬಣ್ಣಿಸಿದರು. ರಾಜ್ಯ ಸರ್ಕಾರವು ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ ಮತ್ತು ಕೃಷಿಯಿಂದ ಬಾಹ್ಯಾಕಾಶದವರೆಗೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 27 ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಹೇಳಿದರು.
ದೇಶದಲ್ಲಿ 1.5 ಮಿಲಿಯನ್ ವಾರ್ಷಿಕ ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ. 22 ರಷ್ಟು ಜನರು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ಉಲ್ಲೇಖಿಸಿ, ಕೌಶಲ್ಯ ಅಭಿವೃದ್ಧಿಯ ನಿರ್ಣಾಯಕ ಮಹತ್ವವನ್ನು ಖರ್ಗೆ ಒತ್ತಿ ಹೇಳಿದರು.
ಇನ್ನು ಹೂಡಿಕೆ ಸ್ಪರ್ಧೆಯ ಕುರಿತು ಮಾತನಾಡಿದ ಖರ್ಗೆ, ಕರ್ನಾಟಕವು ಹೂಡಿಕೆ ತಾಣವಾಗಿ ತನ್ನನ್ನು ತಾನು ಮಾರುಕಟ್ಟೆ ಮಾಡಿಕೊಳ್ಳುವುದನ್ನು ಮೀರಿ ತನ್ನ ಜನರ ಕೌಶಲ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ಹೂಡಿಕೆಯನ್ನು ಅಸ್ಸಾಂಗೆ ತಿರುಗಿಸಲಾಗುತ್ತಿರುವ ಬಗ್ಗೆ ಮಾತನಾಡಿದ ಖರ್ಗೆ, ಅಂತರ-ರಾಜ್ಯ ಸಹಕಾರವು ರಾಜ್ಯದ ಪ್ರಗತಿಗೆ ಹಾನಿ ಮಾಡಬಾರದು ಎಂದು ಪ್ರತಿಪಾದಿಸಿದರು. "ಆರಂಭದಲ್ಲಿ ತಮಿಳುನಾಡು ಅಥವಾ ಕರ್ನಾಟಕಕ್ಕೆ ಬರುವ ನಿರೀಕ್ಷೆಯಿದ್ದ ಸೆಮಿಕಂಡಕ್ಟರ್ ಕಂಪನಿಗಳು ಈಗ ಅಸ್ಸಾಂನತ್ತ ಮುಖ ಮಾಡಿವೆ. ನಾವು ನಮ್ಮ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಬಹುದು - ನೆರೆಯ ರಾಜ್ಯಗಳು ನಮ್ಮ ಸಹೋದರರಾಗಿದ್ದಾರೆ - ನಮ್ಮ ಪ್ರಗತಿಗೆ ಹಾನಿ ಮಾಡುವುದಿಲ್ಲ" ಎಂದರು.
ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸರ್ಕಾರದ ಸ್ಥಿರತೆ ಕುರಿತು ಟಿಎನ್‌ಐಇ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಮ್ಮ ಸರ್ಕಾರ ತುಂಬಾ ಸ್ಥಿರವಾಗಿದೆ. ಅದರಿಂದಾಗಿಯೇ ನಾನು ThinkEdu2025 ಗೆ ಬಂದಿದ್ದೇನೆ ಎಂದರು.
Advertisement