
ನವದೆಹಲಿ: ಪ್ರಯಾಗ್ ರಾಜ್ ಮಹಾ ಕುಂಭಮೇಳ ಸಂದರ್ಭದಲ್ಲಿ ಸಂಗಮದಲ್ಲಿ "ಕಾಲ್ತುಳಿತ" ಅವಘಡ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಮಹಾ ಕುಂಭ ನಿರ್ವಹಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕಿಂತ ಉತ್ತಮ ಆಡಳಿತಗಾರರಿಗೆ ವಹಿಸಬೇಕು, ಅಲ್ಲಿಗೆ ವಿವಿಐಪಿಗಳ ಸಂಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.
ಇಂದು ಮೌನಿ ಅಮಾವಾಸ್ಯೆಯಂದು ಲಕ್ಷಾಂತರ ಯಾತ್ರಿಕರು ಪವಿತ್ರ ಸ್ನಾನಕ್ಕಾಗಿ ಬಂದಿದ್ದರಿಂದ ಭಕ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದರಿಂದ ಮಹಾ ಕುಂಭದ ಮಧ್ಯೆ ಸಂಗಮದಲ್ಲಿ ಕಾಲ್ತುಳಿತ ಉಂಟಾಗಿ ಅನೇಕ ಸಾವುನೋವುಗಳು ಸಂಭವಿಸಿದೆ.
ಈ ಘಟನೆಯ ಹಿನ್ನೆಲೆಯಲ್ಲಿ, ಇಂದು ಮೌನಿ ಅಮಾವಾಸ್ಯೆಯಂದು 'ಅಮೃತ ಸ್ನಾನ'ವನ್ನು ಸ್ಥಗಿತಗೊಳಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಂಗಮ ಮತ್ತು ಮೇಳ ಪ್ರದೇಶದ ಇತರ ಘಾಟ್‌ಗಳಲ್ಲಿ ಸ್ನಾನ ಮಾಡುವುದನ್ನು ಮುಂದುವರೆಸಿದ್ದಾರೆ.
ಮಹಾ ಕುಂಭದ ಸಮಯದಲ್ಲಿ ತೀರ್ಥರಾಜ ಸಂಗಮದ ದಡದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು ಮತ್ತು ಅನೇಕ ಜನರು ಗಾಯಗೊಂಡಿರುವ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಕ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಸರ್ಕಾರ ಸೂಕ್ತ ಮೂಲಭೂತ ವ್ಯವಸ್ಥೆ ಮಾಡದಿರುವುದು, ವಿಐಪಿ ಸಂಚಾರ, ಸ್ವಯಂ ಪ್ರಚಾರಕ್ಕೆ ಹೆಚ್ಚಿನ ಗಮನ ನೀಡುವುದು ಮತ್ತು ದುರುಪಯೋಗ ಇದಕ್ಕೆ ಕಾರಣ. ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ ಇಂತಹ ಅವ್ಯವಸ್ಥೆಗಳು ಖಂಡನೀಯ ಎಂದು ಕಾಂಗ್ರೆಸ್ ಮುಖ್ಯಸ್ಥರು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಹಲವು ಪ್ರಮುಖ ಶಾಹಿ ಸ್ನಾನದ ದಿನಗಳು ಇನ್ನೂ ಇವೆ, ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು, ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ವ್ಯವಸ್ಥೆಯನ್ನು ಸುಧಾರಿಸಬೇಕು" ಎಂದು ಹೇಳಿದ್ದಾರೆ. ವಸತಿ, ಆಹಾರ, ಪ್ರಥಮ ಚಿಕಿತ್ಸೆ ಮತ್ತು ಭಕ್ತರ ಸಂಚಾರ ಇತ್ಯಾದಿಗಳ ವ್ಯವಸ್ಥೆಗಳನ್ನು ವಿಸ್ತರಿಸಬೇಕು, ವಿಐಪಿ ಸಂಚಾರವನ್ನು ನಿಯಂತ್ರಿಸಬೇಕು. ನಮ್ಮ ಸಂತರು ಮತ್ತು ಋಷಿಗಳು ಸಹ ಬಯಸುವುದು ಇದನ್ನೇ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಬೇಕೆಂದು ಖರ್ಗೆ ಒತ್ತಾಯಿಸಿದ್ದಾರೆ. ಪ್ರಯಾಗರಾಜ್ ಮಹಾ ಕುಂಭದಲ್ಲಿ ಕಾಲ್ತುಳಿತದಿಂದ ಅನೇಕ ಜನರು ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾನ್ಯ ಭಕ್ತರ ಬದಲು ವಿಐಪಿ ಸಂಚಾರದ ಮೇಲೆ ಆಡಳಿತದ ವಿಶೇಷ ಗಮನವು ಈ ದುರಂತ ಘಟನೆಗೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಹಾ ಕುಂಭಮೇಳಕ್ಕೆ ಇನ್ನೂ ಸಾಕಷ್ಟು ಸಮಯ ಬಾಕಿ ಇದ್ದು, ಇನ್ನೂ ಅನೇಕ ಮಹಾಸ್ನಾನಗಳು ನಡೆಯಲಿವೆ ಇಂದಿನಂತೆ ದುರಂತ ಘಟನೆಯನ್ನು ತಡೆಯಲು ಸರ್ಕಾರ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಹೇಳಿದರು.
ವಿಐಪಿ ಸಂಸ್ಕೃತಿಯನ್ನು ನಿಯಂತ್ರಿಸಬೇಕು. ಸಾಮಾನ್ಯ ಭಕ್ತರ ಅಗತ್ಯಗಳನ್ನು ಪೂರೈಸಲು ಸರ್ಕಾರ ಉತ್ತಮ ವ್ಯವಸ್ಥೆಗಳನ್ನು ಮಾಡಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾದ ತ್ರಿವೇಣಿ ಸಂಗಮವನ್ನು ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ, ಮಹಾ ಕುಂಭಮೇಳದ ಸಮಯದಲ್ಲಿ ಮತ್ತು ವಿಶೇಷವಾಗಿ ಮೌನಿ ಅಮಾವಾಸ್ಯೆಯಂತಹ ವಿಶೇಷ ಸಂದರ್ಭದಲ್ಲಿ ಇದರಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ತೊಳೆದುಹೋಗಿ ಅವರಿಗೆ ಮೋಕ್ಷ ದೊರೆಯುತ್ತದೆ ಎಂದು ನಂಬುತ್ತಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ಸರ್ಕಾರವು ಇಂದಿನ ಕಾಲ್ತುಳಿತದ ಪರಿಸ್ಥಿತಿಯಿಂದ ಪಾಠ ಕಲಿಯಬೇಕೆಂದು ಹೇಳಿದ್ದಾರೆ. ಭಕ್ತರು ಸಂಯಮ ಮತ್ತು ತಾಳ್ಮೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.
ಮಹಾ ಕುಂಭದಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಇಂದಿನ ದುರ್ಘಟನೆ ಸಂಭವಿಸಿದೆ. ಈ ಕಷ್ಟದ ಸಮಯದಲ್ಲಿ ಭಕ್ತರು ಸಂಯಮ ಮತ್ತು ತಾಳ್ಮೆಯನ್ನು ವಹಿಸಿ ತಮ್ಮ ಯಾತ್ರೆಯನ್ನು ಶಾಂತಿಯುತವಾಗಿ ಪೂರ್ಣಗೊಳಿಸಬೇಕೆಂದು ಮನವಿ ಮಾಡುತ್ತೇವೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಸರ್ಕಾರವು ಇಂದಿನ ಘಟನೆಯಿಂದ ಪಾಠ ಕಲಿಯಬೇಕು. ಭಕ್ತರ ವಾಸ್ತವ್ಯ, ವಸತಿ, ಆಹಾರ, ನೀರು ಮತ್ತು ಇತರ ಸೌಲಭ್ಯಗಳಿಗೆ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಬೇಕು. ಅಪಘಾತದಲ್ಲಿ ಗಾಯಗೊಂಡ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಆಶಿಸಿದ್ದಾರೆ.
ಬಿಜೆಪಿ ಸರ್ಕಾರವು ಮಹಾ ಕುಂಭವನ್ನು ಸ್ವಯಂ ಪ್ರಚಾರದ ಸ್ಥಳವೆಂದು ಪರಿಗಣಿಸಬಾರದು, ಅದನ್ನು ಸೇವಾ ಮನೋಭಾವದಿಂದ ನೋಡಬೇಕು ಎಂದು ಕೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕುಂಭಮೇಳದ
ವ್ಯವಸ್ಥೆಗಳನ್ನು ಟೀಕಿಸಿದ್ದಾರೆ. ಶೌಚಾಲಯ ಸಂಬಂಧಿಸಿದ ಸಮಸ್ಯೆಗಳು ಮತ್ತು ವಿಐಪಿಗಳ ಸಂಚಾರದಿಂದಾಗಿ ಸಾಮಾನ್ಯ ಜನರಿಗೆ ಆಗುವ ಅನಾನುಕೂಲತೆಯನ್ನು ಅಖಿಲೇಶ್ ಯಾದವ್ ಹೇಳಿದ್ದಾರೆ.
Advertisement