ಪಿಜಿ ವೈದ್ಯಕೀಯ ಕೋರ್ಸ್‌ಗಳಲ್ಲಿ ವಾಸಸ್ಥಳ ಆಧಾರಿತ ಮೀಸಲಾತಿ ಅಸಂವಿಧಾನಿಕ: ಸುಪ್ರೀಂ ಕೋರ್ಟ್

2019 ರಲ್ಲಿ ತನ್ವಿ ಬೆಹ್ಲ್ ಮತ್ತು ಶ್ರೇ ಗೋಯೆಲ್ ಅವರನ್ನು ಒಳಗೊಂಡ ಪ್ರಕರಣವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ಪಿಜಿ ವೈದ್ಯಕೀಯ ಕೋರ್ಸ್‌ಗಳಲ್ಲಿ ವಾಸಸ್ಥಳ ಆಧಾರಿತ ಮೀಸಲಾತಿ ಅಸಂವಿಧಾನಿಕ: ಸುಪ್ರೀಂ ಕೋರ್ಟ್
Updated on

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳಲ್ಲಿ ವಾಸಸ್ಥಾನ ಆಧಾರಿತ ಮೀಸಲಾತಿ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುವುದರಿಂದ ಅದಕ್ಕೆ ಅವಕಾಶವಿಲಲ್ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.

ರಾಜ್ಯ ಕೋಟಾಗಳ ಅಡಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಪ್ರವೇಶವು ನೀಟ್ ಪರೀಕ್ಷೆಯಲ್ಲಿ ಕೇವಲ ಅರ್ಹತೆಯ ಆಧಾರದ ಮೇಲೆ ಇರಬೇಕು ಎಂದು ತೀರ್ಪು ಎತ್ತಿ ತೋರಿಸಿದೆ.

ಸ್ನಾತಕೋತ್ತರ (PG) ವೈದ್ಯಕೀಯ ಕೋರ್ಸ್‌ಗಳಲ್ಲಿ ವಾಸಸ್ಥಳ ಆಧಾರಿತ ಮೀಸಲಾತಿ ಸಂವಿಧಾನದ 14 ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಎಸ್‌ವಿಎನ್ ಭಟ್ಟಿ ನೇತೃತ್ವದ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ಹೇಳಿದೆ.

2019 ರಲ್ಲಿ ತನ್ವಿ ಬೆಹ್ಲ್ ಮತ್ತು ಶ್ರೇ ಗೋಯೆಲ್ ಅವರನ್ನು ಒಳಗೊಂಡ ಪ್ರಕರಣವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಪ್ರದೀಪ್ ಜೈನ್ ಮತ್ತು ಸೌರಭ್ ಚಂದ್ರ ಪ್ರಕರಣಗಳಲ್ಲಿ ಹಿಂದಿನ ತೀರ್ಪುಗಳಲ್ಲಿ ಹೇಳಲಾದ ಕಾನೂನನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್, ನಾವೆಲ್ಲರೂ ಭಾರತದೊಳಗೆ ವಾಸಿಸುವವರು. ಇಲ್ಲಿ ಪ್ರಾಂತ್ಯ ಅಥವಾ ರಾಜ್ಯ ನಿವಾಸಗಳೆಂದಿಲ್ಲ. ನಾವೆಲ್ಲರೂ ಭಾರತೀಯರು, ಭಾರತದ ನಿವಾಸಿಗಳು ಎಂದರು.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಈಗಾಗಲೇ ನೀಡಲಾದ ವಾಸಸ್ಥಳ ಮೀಸಲಾತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಿಜಿ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಅಂತಹ ವಾಸಸ್ಥಳ ವಿಭಾಗದಿಂದ ಈಗಾಗಲೇ ಉತ್ತೀರ್ಣರಾದವರು ಈ ತೀರ್ಪಿನಿಂದ ಪ್ರಭಾವಿತರಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತದಲ್ಲಿ ಎಲ್ಲಿಯಾದರೂ ಬದುಕುವ ಹಕ್ಕು ಮತ್ತು ದೇಶದಲ್ಲಿ ಎಲ್ಲಿಯಾದರೂ ವ್ಯಾಪಾರ ಮತ್ತು ವೃತ್ತಿಯನ್ನು ನಡೆಸುವ ಹಕ್ಕು ಭಾರತೀಯರಿಗಿದೆ ಎಂದು ಒತ್ತಿ ಹೇಳಿದೆ. ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆಯುವ ಹಕ್ಕನ್ನು ಸಂವಿಧಾನವು ನಮಗೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com