
ಚಂಡೀಗಢ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಉಪವಿಭಾಗದಲ್ಲಿ ಹಲವು ಮೇಘಸ್ಫೋಟಗಳಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿ ಒಬ್ಬರು ಸಾವನ್ನಪ್ಪಿದ್ದು, 18 ಜನ ಕಾಣೆಯಾಗಿದ್ದಾರೆ. ಅಲ್ಲದೆ ವಿವಿಧ ಸ್ಥಳಗಳಿಂದ ಕನಿಷ್ಠ 41 ಜನರನ್ನು ರಕ್ಷಿಸಲಾಗಿದೆ.
ಭಾರಿ ಮಳೆಯಿಂದ ಮಂಡಿ ಮತ್ತು ಕುಲ್ಲು ನಡುವಿನ ಅನೇಕ ಸ್ಥಳಗಳಲ್ಲಿ ಕಿರಾತ್‌ಪುರ-ಮನಾಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಮತ್ತು ವಾಹನ ಸವಾರರು ಇಡೀ ರಾತ್ರಿ ರಸ್ತೆ ಸುರಂಗಗಳಲ್ಲಿ ಸಿಲುಕಿಕೊಂಡಿದ್ದರು.
ಮಂಡಿ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಮನೆಗಳು, ವಾಹನಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ 12 ಮಕ್ಕಳು ಮತ್ತು 4 ಮಹಿಳೆಯರು ಸೇರಿದಂತೆ 16 ಜನರನ್ನು ರಕ್ಷಿಸಲಾಗಿದೆ. ರಿಕಿ ಗ್ರಾಮದ ಏಳು ಸದಸ್ಯರ ಕುಟುಂಬವನ್ನು ಸಹ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಭಾರಿ ಮಳೆಯಿಂದ ಮಂಡಿ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಜಯುನಿ ಖಾಡ್‌ನ ಎರಡು ಮನೆಗಳು ಬಿಯಾಸ್ ನದಿಯಲ್ಲಿ ಕೊಚ್ಚಿಹೋಗಿ 18 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಮುಂದಿನ 24 ರಿಂದ 48 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಹಠಾತ್ ಪ್ರವಾಹ, ಭೂಕುಸಿತ ಮತ್ತು ಮೂಲಸೌಕರ್ಯ ಕುಸಿತದ ಅಪಾಯ ಹೆಚ್ಚಿದೆ. ಧರ್ಮಶಾಲಾ, ಕುಲ್ಲು ಮತ್ತು ಸೋಲನ್‌ಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
Advertisement