
ಭೋಪಾಲ್: ದೇಶದಲ್ಲಿ ಲಿವ್- ಇನ್ ಫಾರ್ಟನರ್ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಕ್ಷಸಿ ಪ್ರವೃತ್ತಿ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ ಕೊಲೆ ಪ್ರಕರಣದ ಬೆನ್ನಲ್ಲೇ ಇದೀಗ ಪಾಪಿಯೊಬ್ಬ ಲಿವ್ ಇನ್ ಸಂಗಾತಿಯನ್ನು ಕೊಂದು ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟು ಶವದೊಂದಿಗೆ ಎರಡು ದಿನ ಮಲಗಿದ್ದ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದೆ.
ಹೌದು. 32 ವರ್ಷದ ಸಚಿನ್ ರಜಪೂತ್ ಎಂಬಾತ 28 ವರ್ಷದ ರಿತಿಕಾ ಸೇನ್‌ಳನ್ನು ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ರಾತ್ರಿಗಳು ಅದರ ಪಕ್ಕದಲ್ಲಿ ಏನೂ ಆಗಿಲ್ಲ ಎನ್ನುವಂತೆ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಜೂನ್ 27 ರ ರಾತ್ರಿ ತೀವ್ರ ವಾಗ್ವಾದದ ನಂತರ ಕೊಲೆ ನಡೆದಿದೆ. ಕೆಲಸ ಇಲ್ಲದೆ ಅಸೂಯೆಯಿಂದ ಬಳಲುತ್ತಿದ್ದ ಸಚಿನ್, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರಿತಿಕಾಳ ಮೇಲೆ ತನ್ನ ಬಾಸ್ ಜೊತೆ ಸಂಬಂಧವಿದೆ ಎಂದು ಶಂಕಿಸಿದ್ದ ಎನ್ನಲಾಗಿದೆ.
ಜಗಳ ಹಿಂಸಾತ್ಮಕವಾಗಿ ತಿರುಗಿದ್ದು, ಕೋಪದಿಂದ ಆಕೆಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಆದರೆ ನಂತರ ಸಚಿನ್, ಎಚ್ಚರಿಕೆಯಿಂದ ಮೃತದೇಹವನ್ನು ಬೇಡ್ ಶಿಟ್ ನಿಂದ ಸುತ್ತಿ ಹಾಸಿಗೆಯ ಮೇಲೆ ಬಿಟ್ಟು. ಅದೇ ಕೊಠಡಿಯಲ್ಲಿ ಇದ್ದಾನೆ. ಎರಡು ದಿನಗಳ ಕಾಲ ಮೃತ ದೇಹದ ಪಕ್ಕದಲ್ಲಿ ಮಲಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆತಭಾರೀ ಪ್ರಮಾಣದಲ್ಲಿ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಕಂಠಪೂರ್ತಿ ಕುಡಿದ ಸಚಿನ್, ಮಿಸ್ರೋಡ್‌ನಲ್ಲಿರುವ ತನ್ನ ಸ್ನೇಹಿತ ಅನುಜ್‌ಗೆ ಕೊಲೆಯ ವಿಚಾರ ತಿಳಿಸಿದ್ದಾನೆ. ಆರಂಭದಲ್ಲಿ ಆತನನ್ನು ಅನುಜ್ ನಂಬಿಲ್ಲ. ಆದರೆ ಮರುದಿನ ಬೆಳಿಗ್ಗೆ ಸಚಿನ್ ಅದೇ ತಪ್ಪೊಪ್ಪಿಗೆ ಮಾತನ್ನು ಹೇಳಿದಾಗ ಅನುಜ್ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಬಜಾರಿಯಾ ಪೊಲೀಸರು ಸಚಿನ್ ವಾಸಿಸುತ್ತಿದ್ದ ಬಾಡಿಗೆ ಮನೆಗೆ ತಲುಪಿದಾಗ, ಕಂಬಳಿಯಲ್ಲಿ ಸುತ್ತಿಟ್ಟಿದ್ದ ರಿತಿಕಾಳ ಕೊಳೆತ ಶವವನ್ನು ನೋಡಿದ್ದಾರೆ. ನಂತರ ಸಚಿನ್ ನಡೆದ ಎಲ್ಲಾ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಅವರು ಮೂರುವರೆ ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿನ್ ರಜಪುತ್ ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದರೂ ರಿತಿಕಾ ಸೇನ್ ಜೊತೆಗೆ ಲಿವಿಂಗ್ ಟುಗೆದರ್ ನಲ್ಲಿದ್ದ. 9 ತಿಂಗಳ ಹಿಂದೆ ಅವರು ಗಾಯಿತ್ರಿ ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ನಿರುದ್ಯೋಗಿಯಾಗಿದ್ದ ಸಚಿನ್ ಗೆ ರಿತಿಕಾಳ ಮೇಲೆ ಅನುಮಾನ ಹೆಚ್ಚಾಗಿ ಜಗಳ ನಡೆದ ಕೊಲೆಯಾಗಿದೆ. ಆರೋಪಿ ಸಚಿನ್ ನನ್ನು ವಶಕ್ಕೆ ಪಡೆಯಲಾಗಿದ್ದು, ಕೊಲೆ ಕೇಸ್ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬರಬೇಕಾಗಿದ್ದು, ತನಿಖೆ ಮುಂದುವರೆದಿದೆಎಂದು ಪೊಲೀಸ್ ಠಾಣೆ ಉಸ್ತುವಾರಿ ಶಿಲ್ಪಾ ಕೌರವ್ ತಿಳಿಸಿದ್ದಾರೆ.
Advertisement