
ಲಖನೌ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಕನ್ವರ್ ಯಾತ್ರಾ ಮಾರ್ಗದಲ್ಲಿ ಧಾಬಾ ಮತ್ತು ಹೋಟೆಲ್ ಗಳ ಮಾಲೀಕರ ಧರ್ಮ ಪರಿಶೀಲಿಸುತ್ತಿರುವುದನ್ನು ಬುಧವಾರ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಸಮಾಜವಾದಿ ಪಕ್ಷದ ಮಾಜಿ ಸಂಸದ ಎಸ್ ಟಿ ಹಸನ್ ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ಕೆಲವು ಧಾಬಾ ಮಾಲೀಕರಿಗೆ ಅವರ ಧರ್ಮವನ್ನು ಪರಿಶೀಲಿಸಲು ಕೆಲವು ಸಂಘಟನೆಗಳ ಸದಸ್ಯರು ಪ್ಯಾಂಟ್ ಬಿಚ್ಚಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಓವೈಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
"ಮುಜಾಫರ್‌ನಗರ ಹೆದ್ದಾರಿಯ ಬಳಿ ಹಲವಾರು ಹೋಟೆಲ್‌ಗಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. 10 ವರ್ಷಗಳ ಹಿಂದೆ ಈ ಸ್ಥಳಗಳಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಈಗ ಏನು ಸಮಸ್ಯೆ ಎಂದು ನನಗೆ ಅರ್ಥವಾಗುತ್ತಿಲ್ಲ. ಕನ್ವರ್ ಯಾತ್ರೆಯನ್ನು ಇಲ್ಲಿ ಮೊದಲು ಹೇಗೆ ಶಾಂತಿಯುತವಾಗಿ ನಡೆಸಲಾಯಿತು? ಈಗ ಇದೆಲ್ಲ ಏಕೆ ನಡೆಯುತ್ತಿದೆ?" ಎಂದು ಓವೈಸಿ ಪ್ರಶ್ನಿಸಿದ್ದಾರೆ.
"ಹೋಟೆಲ್ ಮಾಲೀಕರಿಗೆ ತಮ್ಮ ಪ್ಯಾಂಟ್ ಬಿಚ್ಚಲು ಹೇಳತ್ತಿರುವ ಈ ಜಾಗೃತ ಸಂಘಟನೆಗಳು ಯಾರು? ಅವರು ಸರ್ಕಾರವನ್ನು ನಡೆಸುತ್ತಿದ್ದಾರೆಯೇ ಅಥವಾ ಆಡಳಿತದ ಉಸ್ತುವಾರಿ ವಹಿಸಿದ್ದಾರೆಯೇ? ಮೊದಲು ಪೊಲೀಸರು ಅವರನ್ನು ಬಂಧಿಸಬೇಕು" ಎಂದು ಓವೈಸಿ ಆಗ್ರಹಿಸಿದರು.
ಉತ್ತರಾಖಂಡದ ಕನ್ವರ್ ಯಾತ್ರೆ ಮಾರ್ಗದಲ್ಲಿ ಕೆಲವು ಹಿಂದೂ ಸಂಘಟನೆಗಳು ಹೋಟೆಲ್ ಮಾಲೀಕರ ಧರ್ಮ ಪರಿಶೀಲಿಸುತ್ತಿರುವುದು "ಭಯೋತ್ಪಾದನೆಯ ಒಂದು ರೂಪ" ಎಂದು ಸಮಾಜವಾದಿ ಪಕ್ಷದ ಮಾಜಿ ಸಂಸದ ಎಸ್.ಟಿ. ಹಸನ್ ಟೀಕಿಸಿದ್ದಾರೆ.
ಕೆಲವು ಹಿಂದೂ ಸಂಘಟನೆಗಳ ಸದಸ್ಯರು ಉತ್ತರಾಖಂಡದ ಹಲವಾರು ನಗರಗಳಲ್ಲಿ ಹೋಟೆಲ್ ಗಳ ಮಾಲೀಕರು ಮತ್ತು ಸಿಬ್ಬಂದಿಯ ಗುರುತನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಮುಸ್ಲಿಮರೆಂದು ಶಂಕಿಸಲಾದ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಈ ಹೇಳಿಕೆ ಬಂದಿವೆ.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ವಿರೋಧ ಪಕ್ಷಗಳು ಮುಸ್ಲಿಮರ ಓಲೈಕೆಯಲ್ಲಿ ತೊಡಗಿವೆ ಎಂದು ಆರೋಪಿಸಿದೆ. ಅಲ್ಲದೆ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಪ್ರತಿಪಾದಿಸಿದೆ.
Advertisement