
ಅಹಮದಾಬಾದ್: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಗುರುವಾರ ಹೇಳಿದ್ದು, ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಕಳೆದ ವರ್ಷದ ಲೋಕಸಭಾ ಚುನಾವಣೆಗೆ ಮಾತ್ರ ಎಂದು ದೆಹಲಿ ಮಾಜಿ ಸಿಎಂ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷವು 2027ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹೋರಾಡುತ್ತದೆ ಮತ್ತು ಗೆಲುವು ಸಾಧಿಸುತ್ತದೆ. ಏಕೆಂದರೆ ರಾಜ್ಯದ ಜನರಿಗೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಬೇರೆ ಆಯ್ಕೆ ಇದೆ. ಅದು ಎಎಪಿ ಎಂದು ಹೇಳಿದರು.
“ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಯಾವುದೇ ಮೈತ್ರಿ ಇದ್ದರೆ, ಅವರು ವಿಸಾವದರ್ ಉಪಚುನಾವಣೆಯಲ್ಲಿ ಏಕೆ ಸ್ಪರ್ಧಿಸಿದರು? ಅವರು ನಮ್ಮನ್ನು ಸೋಲಿಸಲು ಬಂದರು. ನಮ್ಮ ಮತಗಳನ್ನು ಕಡಿತಗೊಳಿಸಲು ಬಿಜೆಪಿ, ಕಾಂಗ್ರೆಸ್ ಅನ್ನು ಕಳುಹಿಸಿತ್ತು ಎಂದರು.
“ಇಂಡಿಯಾ ಬ್ಲಾಕ್ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ. ಈಗ ನಮ್ಮ ಕಡೆಯಿಂದ ಯಾವುದೇ ಮೈತ್ರಿ ಇಲ್ಲ" ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ಜುನಾಗಢ ಜಿಲ್ಲೆಯ ವಿಸಾವದರ್ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಎಪಿ ನಾಯಕ ಗೋಪಾಲ್ ಇಟಾಲಿಯಾ ಅವರು ಬಿಜೆಪಿಯ ಕಿರಿಟ್ ಪಟೇಲ್ ಅವರ ವಿರುದ್ಧ 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಿತಿನ್ ರಣಪಾರಿಯಾ 5,501 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಬಿಜೆಪಿ ತನ್ನ 30 ವರ್ಷಗಳ ಆಡಳಿತದಲ್ಲಿ ಗುಜರಾತ್ ಅನ್ನು ಹಾಳು ಮಾಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಹಾಯ ಮಾಡಿರುವುದರಿಂದ ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಹೇಳಿದರು.
"ರೈತರು, ಯುವಕರು ಅಥವಾ ಮಧ್ಯಮ ವರ್ಗದವರಾಗಿರಲಿ, ಸಮಾಜದ ಪ್ರತಿಯೊಂದು ವರ್ಗವು ಬಿಜೆಪಿಯ ಬಗ್ಗೆ ಅತೃಪ್ತವಾಗಿದೆ. ನಿರುದ್ಯೋಗದ ಹೊರತಾಗಿಯೂ, ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಾಗಿವೆ ಮತ್ತು ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ಮಾತ್ರ ನೀಡಲಾಗುತ್ತದೆ. ಆದಾಗ್ಯೂ, ಜನರಿಗೆ ಯಾವುದೇ ಆಯ್ಕೆ ಇಲ್ಲದ ಕಾರಣ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ" ಎಂದು ಕೇಜ್ರಿವಾಲ್ ಹೇಳಿದರು.
Advertisement