
ಕೋಝಿಕೋಡ್: ಸುಮಾರು ನಾಲ್ಕು ದಶಕಗಳಿಂದ ಸಹಿಸಲಾಗದ ರಹಸ್ಯದೊಂದಿಗೆ ಬದುಕುತ್ತಿದ್ದ ಮೊಹಮ್ಮದಲಿ ಕೊನೆಗೂ ತಾನು ಮಾಡಿದ ಕೊಲೆ ಒಪ್ಪಿಕೊಳ್ಳುವ ಮೂಲಕ 40 ವರ್ಷಗಳಿಂದ ತನ್ನನ್ನು ಕಾಡುತ್ತಿದ್ದ ಪಾಪ ಪ್ರಜ್ಞೆಯಿಂದ ಹೊರ ಬಂದಿದ್ದಾರೆ.
ಮೊಹಮ್ಮದಲಿ ಶುಕ್ರವಾರ ಮಲಪ್ಪುರಂ ಜಿಲ್ಲೆಯ ವೆಂಗಾರದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ, 1986 ರಲ್ಲಿ ತಾನು ಹದಿಹರೆಯದವನಾಗಿದ್ದಾಗ ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಈ ಘಟನೆ ನಡೆದಾಗ ತನಗೆ ಕೇವಲ 14 ವರ್ಷ ವಯಸ್ಸಾಗಿತ್ತು ಎಂದು ಮೊಹಮ್ಮದಲಿ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಕೋಝಿಕೋಡ್ ಜಿಲ್ಲೆಯ ತಿರುವಂಬಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೂಡರಂಜಿ ಎಂಬ ಶಾಂತ ಹಳ್ಳಿಯಲ್ಲಿ ದೇವಸ್ಯ ಎಂಬ ವ್ಯಕ್ತಿಯ ಆಸ್ತಿಯಲ್ಲಿ ಮೊಹಮ್ಮದಲಿ ಕೆಲಸ ಮಾಡುತ್ತಿದ್ದನು.
ಒಂದು ದಿನ, ಒಬ್ಬ ವ್ಯಕ್ತಿ ತನಗೆ ಕಿರುಕುಳ ನೀಡಲು ಯತ್ನಿಸಿದನು. ಈ ವೇಳೆ ಆತ್ಮರಕ್ಷಣೆಗಾಗಿ ನಾನು ಆ ವ್ಯಕ್ತಿಗೆ ಒದ್ದೆನು. ಆದರೆ ಆ ವ್ಯಕ್ತಿ ಹತ್ತಿರದ ಹೊಳೆಗೆ ಬಿದ್ದನು ಎಂದು ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಬಳಿಕ ಭಯದಿಂದ ಎರಡು ದಿನ ಸ್ಥಳದಿಂದ ಪರಾರಿಯಾಗಿದ್ದೇನು. ನಂತರ ವಾಪಸ್ ಬಂದಾಗ ಆ ವ್ಯಕ್ತಿಯ ಮೃತ ದೇಹ ಇನ್ನೂ ನೀರಿನಲ್ಲಿ ಇರುವುದು ಕಂಡುಬಂತು. ಆದರೆ ಪೊಲೀಸರು ಬಂಧಿಸಬಹುದು ಎಂದು ಹೆದರಿ ಮೌನವಾಗಿದ್ದೇನು ಎಂದು ಮೊಹಮ್ಮದಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ಸಮಯದಲ್ಲಿ, ಪೊಲೀಸರು ಯುವಕನ ಸಾವನ್ನು ಸಹಜ ಸಾವೆಂದು ಪರಿಗಣಿಸಿದರು. ಆ ವ್ಯಕ್ತಿಗೆ ಅಪಸ್ಮಾರ ಇದೆ ಎಂದು ಸ್ಥಳೀಯರು ಹೇಳಿದ್ದರು ಮತ್ತು ಶವವನ್ನು ಗುರುತಿಸಲು ಯಾರೂ ಮುಂದೆ ಬರಲಿಲ್ಲ. ಯಾವುದೇ ಸುಳಿವುಗಳಿಲ್ಲದೆ, ಪ್ರಕರಣ ಮುಚ್ಚಿ ಹೋಯಿತು.
ಆದರೆ ಮೊಹಮ್ಮದಲಿಗೆ ಪಾಪ ಪ್ರಜ್ಞೆ ಕಾಡಲಾರಂಭಿಸತು. ಈಗ 50ನೇ ವಯಸ್ಸಿನಲ್ಲಿ ತನ್ನ ಕುಟುಂಬಕ್ಕೆ ವೈಯಕ್ತಿಕ ದುರಂತಗಳು ಸಂಭವಿಸಿದ ನಂತರ, ಪಾಪ ಪ್ರಜ್ಞೆಯಿಂದ ಹೊರ ಬರಲು ನಿರ್ಧರಿಸಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮೊಹಮ್ಮದಲಿಯ ಹಿರಿಯ ಮಗ ನಿಧನರಾದರು ಮತ್ತು ಆತನ ಕಿರಿಯ ಮಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡನು. ಈ ಘಟನೆಗಳ ನಂತರ ತನಗೆ ನಿದ್ರೆ ಬರುತ್ತಿಲ್ಲ. ಹೀಗಾಗಿ ತನ್ನ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ತನಿಖಾಧಿಕಾರಿಗಳು ಆತನ ತಪ್ಪೊಪ್ಪಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಮತ್ತೆ ಸ್ಥಳಕ್ಕೆ ಆತನನ್ನು ಕರೆದೊಯ್ದು, ಶವ ಇದ್ದ ಸ್ಥಳವನ್ನು ಪರಿಶೀಲಿಸಿದ್ದಾರೆ.
ಈಗ, ತಿರುವಂಬಾಡಿ ಸ್ಟೇಷನ್ ಹೌಸ್ ಅಧಿಕಾರಿ ಕೆ. ಪ್ರಜೀಶ್ ನೇತೃತ್ವದ ಪೊಲೀಸ್ ತಂಡವು ಮೃತ ಯುವಕನ ಗುರುತು ಪತ್ತೆಹಚ್ಚುವ ಪ್ರಯತ್ನದಲ್ಲಿ ಹಳೆಯ ಫೈಲ್‌ಗಳು ಮತ್ತು ಪತ್ರಿಕೆ ವರದಿಗಳನ್ನು ಪರಿಶೀಲಿಸುತ್ತಿದೆ.
ಇಲ್ಲಿಯವರೆಗೆ, ಉಳಿದಿರುವ ಏಕೈಕ ದಾಖಲೆ ಎಂದರೆ ಡಿಸೆಂಬರ್ 5, 1986 ರಂದು ವರದಿಯಾದ ಸಣ್ಣ ಸುದ್ದಿ. ಅದು ಹೀಗಿದೆ: "ಕೂಡರಂಜಿ: ಮಿಷನ್ ಆಸ್ಪತ್ರೆಯ ಹಿಂಭಾಗದ ಸಣ್ಣ ಹೊಳೆಯಲ್ಲಿ ಯುವಕನ ಶವ ಪತ್ತೆ. ಅಂದಾಜು ವಯಸ್ಸು: 20"
ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದಲಿ ವಿರುದ್ಧ ಪೊಲೀಸರು ಈಗ ಕೊಲೆ ಪ್ರಕರಣ ದಾಖಲಿಸಿದ್ದಾರೆ.
Advertisement