
ಪೋರ್ಟ್ ಆಫ್ ಸ್ಪೈನ್: ಭಾರತೀಯ ಕಾಲಮಾನ ನಿನ್ನೆ ಗುರುವಾರ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು ಇದಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಔತಣಕೂಟದ ಸಮಯದಲ್ಲಿ ಸೊಹಾರಿ ಎಲೆಯಲ್ಲಿ ಬಡಿಸುವ ಆಹಾರವು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ, ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸೊಹಾರಿ ಎಲೆಯಲ್ಲಿ ಆಹಾರ ಬಡಿಸಲಾಗಿತ್ತು. ಇದು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ, ವಿಶೇಷವಾಗಿ ಭಾರತೀಯ ಮೂಲವನ್ನು ಹೊಂದಿರುವವರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವದ್ದಾಗಿದೆ. ಇಲ್ಲಿ, ಹಬ್ಬಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಸೊಹಾರಿ ಎಲೆಯಲ್ಲಿ ಆಹಾರವನ್ನು ಹೆಚ್ಚಾಗಿ ಬಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಔತಣಕೂಟದಲ್ಲಿ, ಪ್ರಧಾನಿ ಮೋದಿ ರಾಮ ಮಂದಿರದ ಪ್ರತಿಕೃತಿ ಮತ್ತು ಸರಯು ನದಿಯ ಪವಿತ್ರ ನೀರನ್ನು ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ನೀರನ್ನು ಕಮಲಾ ಪ್ರಸಾದ್-ಬಿಸ್ಸೆಸ್ಸರ್‌ಗೆ ಉಡುಗೊರೆಯಾಗಿ ನೀಡಿದರು. ಪ್ರಧಾನಿ ಕಮಲ ಪ್ರಸಾದ್-ಬಿಸ್ಸೆಸ್ಸರ್ ಅವರು ಆಯೋಜಿಸಿದ್ದ ಔತಣಕೂಟದಲ್ಲಿ, ನಾನು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಕೃತಿ ಮತ್ತು ಸರಯು ನದಿಯ ಪವಿತ್ರ ಜಲ ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದ ಪವಿತ್ರ ಜಲವನ್ನು ಉಡುಗೊರೆಯಾಗಿ ನೀಡಿದ್ದೇನೆ. ಅವು ಭಾರತ ಮತ್ತು ಟ್ರಿನಿಡಾಡ್- ಟೊಬಾಗೊ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯವನ್ನು ಸಂಕೇತಿಸುತ್ತವೆ ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಸೊಹಾರಿ ಎಲೆ ಎಂದರೇನು?
ಸೊಹಾರಿ ಎಲೆಯು ಶುಂಠಿಗೆ ಸಂಬಂಧಿಸಿದ ಉಷ್ಣವಲಯದ ಜಾತಿಯಾದ ಕ್ಯಾಲಥಿಯಾ ಲೂಟಿಯಾ ಸಸ್ಯದಿಂದ ಬಂದಿದೆ. ಸಾಮಾನ್ಯವಾಗಿ ಬಿಜಾವೊ ಅಥವಾ ಸಿಗಾರ್ ಸಸ್ಯ ಎಂದು ಕರೆಯಲ್ಪಡುವ ಇದು ಕೆರಿಬಿಯನ್, ಮಧ್ಯ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ವ್ಯಾಪಕವಾಗಿ ಬೆಳೆಯುತ್ತದೆ. ಈ ಸಸ್ಯವು 3 ಮೀಟರ್ (10 ಅಡಿ) ಎತ್ತರ ಬೆಳೆಯುತ್ತದೆ. ಅದರ ಅಗಲವಾದ, ಮೇಣದಂತಹ ಎಲೆಗಳು, ಸಾಮಾನ್ಯವಾಗಿ ಒಂದು ಮೀಟರ್‌ಗಿಂತ ಹೆಚ್ಚು ಉದ್ದವಿರುತ್ತವೆ, ನೈಸರ್ಗಿಕವಾಗಿ ಆಹಾರ ಹೊದಿಕೆಗಳು ಅಥವಾ ತಟ್ಟೆಗಳಾಗಿ ಬಳಸಲು ಸೂಕ್ತವಾಗಿವೆ.
ಟ್ರಿನಿಡಾಡ್‌ನಲ್ಲಿ ಆಹಾರ ಬಡಿಸಲು ಸೊಹಾರಿ ಎಲೆ ಏಕೆ ಬಳಸಲಾಗುತ್ತದೆ
ಸೊಹಾರಿ ಎಂಬ ಪದವು ಭೋಜ್‌ಪುರಿ ಭಾಷೆಯಲ್ಲಿ "ದೇವರುಗಳಿಗೆ ಆಹಾರ" ಎಂದರ್ಥ. ಮೂಲತಃ, ಈ ಪದವು ಧಾರ್ಮಿಕ ಆಚರಣೆಗಳ ಸಮಯದಲ್ಲಿ ಹಿಂದೂ ಪುರೋಹಿತರಿಗೆ ಸಾಂಪ್ರದಾಯಿಕವಾಗಿ ನೀಡಲಾಗುತ್ತಿದ್ದ ತುಪ್ಪದಿಂದ ಬೇಯಿಸಿದ ಚಪ್ಪಟೆ ಬ್ರೆಡ್ (ರೊಟ್ಟಿ) ನ್ನು ಉಲ್ಲೇಖಿಸುತ್ತದೆ.
ಕಾಲಾನಂತರದಲ್ಲಿ, ಈ ಆಹಾರವನ್ನು ಬಡಿಸಲು ಬಳಸಲಾಗುವ ದೊಡ್ಡ ಎಲೆಯನ್ನು ಸೊಹಾರಿ ಎಲೆ ಎಂದೂ ಕರೆಯಲಾಯಿತು. ಇಂದು, ಇದನ್ನು ಸಾಮಾನ್ಯವಾಗಿ ಧಾರ್ಮಿಕ ಸಭೆಗಳು, ಮದುವೆಗಳು, ಸಮುದಾಯ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.
ಏಕೆ ಮುಖ್ಯ
ಸೊಹಾರಿ ಎಲೆಯನ್ನು ತಿನ್ನುವುದು ಕೇವಲ ಪ್ರಾಯೋಗಿಕ ಆಯ್ಕೆಗಿಂತ ಹೆಚ್ಚಿನದಾಗಿದೆ, ಇಂಡೋ-ಟ್ರಿನಿಡಾಡಿಯನ್ನರಿಗೆ, ಇದು ಭಾರತದಿಂದ ಬಂದ ಅವರ ಪೂರ್ವಜರ ಸಂಪ್ರದಾಯಗಳ ಜ್ಞಾಪನೆ ಸಂಕೇತವಾಗಿದೆ. ಪ್ರಧಾನಿ ಮೋದಿ ಗಮನಿಸಿದಂತೆ, ಈ ಎಲೆಯ ಮೇಲೆ ಆಹಾರವನ್ನು ಬಡಿಸುವ ಕ್ರಿಯೆಯು ಭಾರತೀಯ ಮೂಲ ಹೊಂದಿರುವವರಿಗೆ ವಿಶೇಷವಾಗಿ ಅರ್ಥಪೂರ್ಣವಾಗಿದೆ.
ಸೊಹಾರಿ ಎಲೆ ಎರಡು ಸಂಸ್ಕೃತಿಗಳ ನಡುವಿನ ಸೇತುವೆಯಾಗುತ್ತದೆ. ಇದು ಸಾಂಪ್ರದಾಯಿಕ ಭಾರತೀಯ ಊಟದ ಪದ್ಧತಿಗಳನ್ನು ಗೌರವಿಸುತ್ತದೆ.
Advertisement