
ರಾಂಬನ್: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರಿದ್ದ ಐದು ಬಸ್ ಗಳು ಪರಸ್ಪರ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡ ಪರಿಣಾಮ ಕನಿಷ್ಠ 36 ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಸ್‌ಗಳು ಜಮ್ಮುವಿನ ಭಗವತಿ ನಗರದಿಂದ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ ವೇಳೆ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಂದರ್ ಕೂಟ್ ಬಳಿ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಅವಘಡ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಾವಲು ಪಡೆಯಲ್ಲಿರುವ ಬಸ್ ಒಂದರ ಬ್ರೇಕ್ ವೈಫಲ್ಯದಿಂದ ಡಿಕ್ಕಿ ಸಂಭವಿಸಿದೆ. ಬೆಂಗಾವಲಿನಲ್ಲಿದ್ದ ಕೊನೇ ಬಸ್, ನಿಯಂತ್ರಣ ಕಳೆದುಕೊಂಡು ಮುಂದಿನ ಬಸ್ ಗೆ ಗುದ್ದಿದೆ. ಇದರಿಂದಾಗಿ ನಾಲ್ಕು ಬಸ್ ಗಳಲ್ಲಿದ್ದ 36 ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ರಾಂಬನ್ ಉಪ ಆಯುಕ್ತ ಮೊಹಮ್ಮದ್ ಅಲಿಯಾಸ್ ಖಾನ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಗಾಯಾಳುಗಳನ್ನು ರಾಂಬನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್ ಮಾಡಲಾಯಿತು ಎಂದು ರಾಂಬನ್ ವೈದ್ಯಕೀಯ ಮಹಾ ಅಧೀಕ್ಷಕ ಸುದರ್ಶನ್ ಸಿಂಗ್ ಕಟೋಚ್ ತಿಳಿಸಿದ್ದಾರೆ.
ಹಾನಿಗೊಳಗಾದ ಬಸ್‌ಗಳನ್ನು ಬದಲಾಯಿಸಿ ಅಮರನಾಥ ಯಾತ್ರಿಕರ ಸುಗಮ ಯಾತ್ರೆಗೆ ಅನುಕೂಲ ಮಾಡಿಕೊಡಲಾಗಿದೆ.
Advertisement