
ಮುಂಬೈ: ಮುಂಬೈನಲ್ಲಿ ಸಹೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಜಂಟಿ ರ‍್ಯಾಲಿ ವಿರುದ್ಧ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು, ಇದು ಸಮಾಜವನ್ನು ವಿಭಜಿಸುವ ಮತ್ತು ರಾಜ್ಯವನ್ನು ದುರ್ಬಲಗೊಳಿಸುವ ಗುರಿ ಹೊಂದಿರುವ "ಜಿಹಾದಿ ಮತ್ತು ಹಿಂದೂ ವಿರೋಧಿ ರ್ಯಾಲಿ" ಎಂದು ಟೀಕಿಸಿದ್ದಾರೆ.
ಎರಡು ದಶಕಗಳ ನಂತರ, ಉದ್ಧವ್ ಮತ್ತು ರಾಜ್ ಠಾಕ್ರೆ ಅವರು ರಾಜಕೀಯ ವೈರತ್ವದ ಕಹಿ ಮರೆತು ಶನಿವಾರ ಮುಂಬೈನ ವರ್ಲಿ ಪ್ರದೇಶದಲ್ಲಿ ಒಟ್ಟಿಗೆ ಸಾರ್ವಜನಿಕ ವೇದಿಕೆ ಹಂಚಿಕೊಂಡರು ಮತ್ತು 'ಅವಾಜ್ ಮರಾಠಿಚಾ' (ಮರಾಠಿಯ ಧ್ವನಿ) ಎಂಬ ಹೆಸರಿನ ವಿಜಯ ರ‍್ಯಾಲಿಯಲ್ಲಿ, ಕಿಕ್ಕಿರಿದು ತುಂಬಿದ್ದ ಬೆಂಬಲಿಗರ ಹರ್ಷೋದ್ಗಾರಗಳ ನಡುವೆ ಇಬ್ಬರೂ ಸಹೋದರರು ಪರಸ್ಪರ ಆಲಂಗಿಸಿಕೊಂಡರು.
ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ರಾಜ್ಯದ ಶಾಲೆಗಳಲ್ಲಿ 1ನೇ ತರಗತಿಯಿಂದ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುತ್ತಿರುವುದನ್ನು ಠಾಕ್ರೆ ಸಹೋದರರು ತೀವ್ರವಾಗಿ ವಿರೋಧಿಸಿದ್ದಾರೆ.
ರ‍್ಯಾಲಿಗೆ ಒಂದು ದಿನ ಮೊದಲು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, "ನಾವು ಹಿಂದೂಗಳು ಮತ್ತು ಹೆಮ್ಮೆಯ ಮರಾಠಿಗಳು. ಜಿಹಾದಿಗಳು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ರೀತಿಯಲ್ಲಿ, ಈ ಜನ ರ‍್ಯಾಲಿ ಮಾಡುತ್ತಿದ್ದಾರೆ. ಅದು(ನಿಷೇಧಿತ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗಿರಲಿ ಅಥವಾ ಹಿಂದೂ ರಾಷ್ಟ್ರದ ಕಲ್ಪನೆಗೆ ವಿರುದ್ಧವಾಗಿ ಕೆಲಸ ಮಾಡುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಆಗಿರಲಿ. ಈ ಇಬ್ಬರು (ಠಾಕ್ರೆಗಳು) ಸಹ ಅವುಗಳಿಗೆ ಭಿನ್ನವಾಗಿಲ್ಲ. ಅವರು ರಾಜ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.
"ವರ್ಲಿ ಸಭೆಯು ಹಿಂದೂಗಳು ಮತ್ತು ಮರಾಠಿ ಜನರನ್ನು ವಿಭಜಿಸುವ ಗುರಿ ಹೊಂದಿದೆ. ಇದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್, ಪಿಎಫ್‌ಐ ರ‍್ಯಾಲಿಗಳಿಗೆ ಸಮನಾಗಿದೆ. ಇದು ರಾಜ್ಯದ ಹಿಂದೂಗಳಿಗೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ರ‍್ಯಾಲಿ ನಂತರ, ನಲ್ ಬಜಾರ್‌ನಲ್ಲಿ (ಮುಂಬೈನಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶ) ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಪಟಾಕಿಗಳನ್ನು ಸಿಡಿಸಲಾಗುತ್ತದೆ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
"ಇದು ಹಿಂದೂ ವಿರೋಧಿ ರ್ಯಾಲಿ" ಎಂದು ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವರು ಹೇಳಿದ್ದಾರೆ.
Advertisement