
ನಾಗ್ಪುರ: ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಪತ್ತು ಕೆಲವೇ ಕೆಲವು ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಪತ್ತಿನ ವಿಕೇಂದ್ರೀಕರಣದ ಅವಶ್ಯಕತೆಯಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದೇ ವೇಳೆ ಅವರು ಕೃಷಿ, ಉತ್ಪಾದನೆ, ತೆರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
"ಬಡವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ ಮತ್ತು ಸಂಪತ್ತು ಕೆಲವೇ ಕೆಲವು ಶ್ರೀಮಂತ ಜನರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ. ಅದು ಆಗಬಾರದು" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದ್ದಾರೆ.
ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಗ್ರಾಮೀಣ ಪ್ರದೇಶಗಳನ್ನು ಉನ್ನತೀಕರಿಸುವ ರೀತಿಯಲ್ಲಿ ಆರ್ಥಿಕತೆಯು ಬೆಳೆಯಬೇಕು ಎಂದು ಅವರು ಹೇಳಿದರು.
ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರು ಉದಾರ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಕೇಂದ್ರ ಸಚಿವರು ಕೃತಜ್ಞತೆ ಸಲ್ಲಿಸಿದರು, ಆದರೆ ಅನಿಯಂತ್ರಿತ ಕೇಂದ್ರೀಕರಣದ ವಿರುದ್ಧ ಎಚ್ಚರಿಕೆ ನೀಡಿದರು.
"ದೇಶದ ಆರ್ಥಿಕತೆಗೆ ಉತ್ಪಾದನಾ ಕ್ಷೇತ್ರವು ಶೇಕಡಾ 22 ರಿಂದ 24, ಸೇವಾ ಕ್ಷೇತ್ರ ಶೇಕಡಾ 52-54 ಕೊಡುಗೆ ನೀಡುತ್ತವೆ. ಆದರೆ ಕೃಷಿಯು ಗ್ರಾಮೀಣ ಜನಸಂಖ್ಯೆಯ ಶೇಕಡಾ 65-70 ರಷ್ಟು ತೊಡಗಿಸಿಕೊಂಡಿದ್ದರೂ ಕೇವಲ ಶೇಕಡಾ 12 ರಷ್ಟು ಕೊಡುಗೆ ನೀಡುತ್ತದೆ" ಎಂದು ಅವರು ಹೇಳಿದರು.
Advertisement