
ನವದೆಹಲಿ: 26/11 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾ ಮುಂಬೈ ಕ್ರೈಂ ಬ್ರಾಂಚ್‌ಗೆ ಕೆಲವು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ತಾನು ಪಾಕ್ ಸೇನೆಯ ನಂಬಿಕಸ್ಥ ಏಜೆಂಟ್ ಮತ್ತು 2008 ರ ದಾಳಿಯ ಸಮಯದಲ್ಲಿ ಮುಂಬೈನಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
26/11 ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ಹುಸೇನ್ ರಾಣಾ, ದಾಳಿ ವೇಳೆ ವಾಣಿಜ್ಯ ನಗರದಲ್ಲಿದ್ದು, ಪಾಕ್ ಸೇನೆಯ ನಂಬಿಕಸ್ಥ ಏಜೆಂಟ್ ಆಗಿ ಕಾರ್ಯನಿರ್ವಹಿಸಿರುವುದಾಗಿ ಮುಂಬೈ ಕ್ರೈಂ ಬ್ರಾಂಚ್ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಮಾಹಿತಿಯಿಂದ 170 ಕ್ಕೂ ಹೆಚ್ಚು ಜನರನ್ನು ಕೊಂದ ಮತ್ತು 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಮಾರಣಾಂತಿಕ 2008 ರ ಮುಂಬೈ ದಾಳಿಯ ಯೋಜನೆ ಮತ್ತು ಅದರಲ್ಲಿ ಪಾಕಿಸ್ತಾನದ ಕೈವಾಡವನ್ನು ಮತ್ತಷ್ಟು ದೃಢಪಡಿಸುತ್ತದೆ.
ವರ್ಷಗಳ ಕಾನೂನು ಹೋರಾಟ ಮತ್ತು ಹಸ್ತಾಂತರ ಪ್ರಕ್ರಿಯೆ ನಂತರ ಭಾರತಕ್ಕೆ ಕರೆತಂದ ರಾಣಾನ ಮೊದಲ ಸುತ್ತಿನ ವಿಚಾರಣೆಯ ಸಮಯದಲ್ಲಿ ಈ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ರಾಣಾನನ್ನು ವಿಚಾರಣೆ ನಡೆಸಲಾಗಿದೆ ಎಂದು ಎನ್ಐಎ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ವಿಚಾರಣೆಯ ಸಮಯದಲ್ಲಿ ಆತನ ತಪ್ಪಿಸಿಕೊಳ್ಳುವ ವರ್ತನೆ ಮತ್ತು ಸಹಕಾರದ ಕೊರತೆಯನ್ನು ಉಲ್ಲೇಖಿಸಿ ಮತ್ತಷ್ಟು ಕಸ್ಟಡಿಗಾಗಿ ಸಂಸ್ಥೆ ವಾದಿಸಿತು.
ಹಿರಿಯ ವಕೀಲ ದಯನ್ ಕೃಷ್ಣನ್ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನರೇಂದರ್ ಮಾನ್ ಅವರು ಎನ್‌ಐಎಯನ್ನು ಪ್ರತಿನಿಧಿಸಿದರೆ, ವಕೀಲ ಪಿಯೂಷ್ ಸಚ್‌ದೇವ ಅವರು ರಾಣಾ ಪರ ವಾದ ಮಂಡಿಸಿದರು.
ಏಪ್ರಿಲ್ 4 ರಂದು ಹಸ್ತಾಂತರದ ವಿರುದ್ಧ ರಾಣಾ ಸಲ್ಲಿಸಿದ ಅಂತಿಮ ಮೇಲ್ಮನವಿಯನ್ನು US ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಏಪ್ರಿಲ್ 10 ರಂದು ಆತನನ್ನು ಯುನೈಟೆಡ್ ಸ್ಟೇಟ್ಸ್‌ನಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು.
26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಣಾನನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ. ಇದು ಭಾರತದ ನೆಲದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದ್ದು, 166 ಜನರನ್ನು ಬಲಿ ತೆಗೆದುಕೊಂಡಿತು. ತಾಜ್ ಹೋಟೆಲ್ ಸೇರಿದಂತೆ ಮುಂಬೈನಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ನಡೆದ ದಾಳಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಅಲ್ಲದೇ ಸಾಕಷ್ಟು ಭೀತಿ ಉಂಟು ಮಾಡಿತ್ತು.
Advertisement