
ನವದೆಹಲಿ: ದೇಶದಲ್ಲಿ ಹತ್ತಿ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಇಟ್ಟುಕೊಂಡು ಪ್ರಮುಖ ಕೃಷಿ ಸುಧಾರಣೆಯಲ್ಲಿ, ಕೇಂದ್ರ ಸರ್ಕಾರವು ವಿವಾದಾತ್ಮಕ ಕಳೆನಾಶಕ-ಸಹಿಷ್ಣು (Ht) ಬಿಟಿಹತ್ತಿ (HtBt ಹತ್ತಿ) ಯನ್ನು ಕಾನೂನುಬದ್ಧಗೊಳಿಸಲು ಚಿಂತನೆ ನಡೆಸುತ್ತಿದೆ.
ಹೆಚ್ ಟಿಬಿಟಿ ಹತ್ತಿ ಬೀಜಗಳ ಬಗ್ಗೆ ಸಂಶೋಧನೆ ಅಧ್ಯಯನ ನಡೆಸುವ ತಜ್ಞರ ಸಮಿತಿಯು ಮೂರು ವರ್ಷಗಳ ಜೈವಿಕ ಸುರಕ್ಷತಾ ಅಂಕಿಅಂಶಗಳನ್ನು ವಿಶ್ಲೇಷಿಸಿದ ನಂತರ, ಅದರ ವಾಣಿಜ್ಯ ಕೃಷಿಗಾಗಿ ಉನ್ನತ ಜೈವಿಕ ಸುರಕ್ಷತಾ ನಿಯಂತ್ರಕ ಸಂಸ್ಥೆಯಾದ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (GEAC) ಗೆ ಸಕಾರಾತ್ಮಕವಾಗಿ ಶಿಫಾರಸು ಮಾಡಿದೆ.
ಸಮಿತಿಯ ಈ ಅನುಮೋದನೆಯು ರೈತರು ಹತ್ತಿ ಬೆಳೆಗಳಿಗೆ ಹಾನಿಯಾಗದಂತೆ ಕಳೆಗಳನ್ನು ತೊಡೆದುಹಾಕಲು ಬಳಸುವ ವಿವಾದಾತ್ಮಕ ಕಳೆನಾಶಕವಾದ ಗ್ಲೈಫೋಸೇಟ್ ನ್ನು ವಿವೇಚನೆಯಿಲ್ಲದೆ ಸಿಂಪಡಿಸಲು ಕಾರಣವಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಪರಿಸರ ಮತ್ತು ಹತ್ತಿರದ ಹೊಲಗಳಲ್ಲಿ ಬೆಳೆಯುವ ಇತರ ಬೆಳೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎನ್ನುತ್ತಾರೆ.
ಜಿಇಎಸಿ, 2022 ರಲ್ಲಿ ಹೆಚ್ ಟಿಬಿಟಿ ಹತ್ತಿಯ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಸಮಿತಿಯನ್ನು ನೇಮಿಸಿತು. ಸಮಿತಿಯು 2022ರಿಂದ 2024ರ ಮಧ್ಯೆ, ಬೇಯರ್ ಒಡೆತನದ, ಮಾನ್ಸಾಂಟೊ-ಪೇಟೆಂಟ್ ಪಡೆದ ಹೆಚ್ ಟಿಬಿಟಿ ಹತ್ತಿಯ ಜೈವಿಕ ಸುರಕ್ಷತಾ ಅಂಕಿಅಂಶವನ್ನು ನಿರ್ಣಯಿಸಿತು, ಹೊಸ ಅಪಾಯದ ಮೌಲ್ಯಮಾಪನ, ಅಪಾಯ ನಿರ್ವಹಣೆ ಮತ್ತು ಇಳುವರಿ ಹಕ್ಕನ್ನು ಪರಿಶೀಲಿಸಿದಾಗ ತೃಪ್ತಿಕರವಾಗಿ ಕಂಡುಬಂದಿದೆ ಎಂದಿತು.
ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ವರ್ಷಗಳಿಂದ ಹೆಚ್ ಟಿಬಿಟಿ ಹತ್ತಿ ಕೃಷಿ ಕಾನೂನುಬಾಹಿರವಾಗಿ ನಡೆಯುತ್ತಿದೆ.
ನಾವು ವಾಣಿಜ್ಯ ಕೃಷಿಗೆ ಅನುಮೋದನೆ ನೀಡಿದರೆ ಅನಧಿಕೃತ ಹತ್ತಿ ಬೀಜಗಳನ್ನು ಪಡೆಯುತ್ತಿರುವ ರೈತರು ಸರಿಯಾದ ಗುಣಮಟ್ಟದ ಬೀಜಗಳನ್ನು ಪಡೆಯುತ್ತಾರೆ, ಆಗ ಬೀಜ ಮಾರಾಟಗಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ದೇಶಾದ್ಯಂತ ಹತ್ತಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿರುವುದರಿಂದ ಜವಳಿ ಸಚಿವಾಲಯವು ಈ ಬದಲಾವಣೆಗೆ ಬೆಂಬಲ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ, ಕೃಷಿ ಸಚಿವಾಲಯದ ತಜ್ಞರ ಗುಂಪು, ಐಸಿಎಆರ್ ವಿಜ್ಞಾನಿಗಳು, ಜವಳಿ ಸಚಿವಾಲಯ, ಜಿಇಎಸಿ ತಜ್ಞರ ಸಮಿತಿ ಸದಸ್ಯರು ಮತ್ತು ಇತರ ಪಾಲುದಾರರು ನಾಳೆ ಕೊಯಮತ್ತೂರಿನಲ್ಲಿ ಒಟ್ಟು ಸೇರಿ ಎಚ್‌ಟಿಬಿಟಿ ಹತ್ತಿ ಬಿಡುಗಡೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದಾರೆ.
ಹತ್ತಿ ಉತ್ಪಾದನೆಯಲ್ಲಿ ಭಾರತವು ವಿಶ್ವದ ಅಗ್ರ ಉತ್ಪಾದಕ ಮತ್ತು ಎರಡನೇ ರಫ್ತುದಾರ ರಾಷ್ಟ್ರವಾಗಿದ್ದು ತನ್ನ ಗತವೈಭವವನ್ನು ಮತ್ತೆ ಪಡೆಯಲು ಸರ್ಕಾರ ಪ್ರತ್ಯೇಕ ಹತ್ತಿ ಕಾರ್ಯಾಚರಣೆಯನ್ನು ಘೋಷಿಸಬಹುದು ಎಂದು ಮೂವರು ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ(New Indian Express)ಗೆ ಇದನ್ನು ದೃಢಪಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಹತ್ತಿ ಉತ್ಪಾದನೆಯು ಕುಸಿಯುತ್ತಿದೆ. 2013-14ರಲ್ಲಿ ಭಾರತದಲ್ಲಿ ಹತ್ತಿ ಉತ್ಪಾದನೆಯು ಗರಿಷ್ಠ ಮಟ್ಟವನ್ನು ತಲುಪಿತ್ತು. 398 ಲಕ್ಷ ಬೇಲ್ (LB) ಉತ್ಪಾದನೆಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಕುಸಿತ ಕಂಡಿತು, 2024-2025ರಲ್ಲಿ 301.75 ಎಲ್‌ಬಿಗೆ ಕುಸಿಯಿತು, ಅಗ್ರ ಉತ್ಪಾದಕ ರಾಷ್ಟ್ರ ಎಂದು ಚೀನಾ ಸ್ಥಾನ ಪಡೆದುಕೊಂಡಿತು.
ಪರಿಸರವಾದಿಗಳ ಕಳಕಳಿ ಏನು?
HtBt ಹತ್ತಿ ಬೀಜಗಳ ಕುರಿತಾದ ತಜ್ಞರ ಸಮಿತಿಯು ಅದರ ವಾಣಿಜ್ಯ ಕೃಷಿಗಾಗಿ ಉನ್ನತ ಜೈವಿಕ ಸುರಕ್ಷತಾ ನಿಯಂತ್ರಣ ಸಂಸ್ಥೆಗೆ ಶಿಫಾರಸನ್ನು ನೀಡಿದೆ.
ಪರಿಸರವಾದಿಗಳು ಈ ಅನುಮೋದನೆಯು ರೈತರು ವಿವಾದಾತ್ಮಕ ಕಳೆನಾಶಕವಾದ ಗ್ಲೈಫೋಸೇಟ್ ನ್ನು ವಿವೇಚನೆಯಿಲ್ಲದೆ ಸಿಂಪಡಿಸಲು ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ
ಈ ಪದ್ಧತಿಯು ಪರಿಸರ ಮತ್ತು ಹತ್ತಿರದ ಹೊಲಗಳಲ್ಲಿ ಬೆಳೆಯುವ ಇತರ ಬೆಳೆಗಳ ಮೇಲೆ ಪರಿಣಾಮ ಉಂಟುಮಾಡಬಹುದು ಎನ್ನುತ್ತಿದ್ದಾರೆ.
Advertisement