
ಸುಕ್ಮಾ: ಛತ್ತೀಸ್ ಗಢದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುತ್ತಿರುವ ನಕ್ಸಲೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಾರಾಯಣಪುರ ಜಿಲ್ಲೆಯಲ್ಲಿ ನಿನ್ನೆಯಷ್ಟೇ 22 ನಕ್ಸಲೀಯರು ಶರಣಾಗಿದ್ದರು. ಇಂದು ಸುಕ್ಮಾ ಜಿಲ್ಲೆಯಲ್ಲಿ ರೂ. 1.18 ಕೋಟಿ ಬಹುಮಾನ ಘೋಷಿಸಲಾಗಿದ್ದ ಮೂವರು ದಂಪತಿ ಸೇರಿದಂತೆ 23 ನಕ್ಸಲೀಯರು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಲ್ಲಿ ನಕ್ಸಲ್ ಗುಂಪಿನ 11 ಹಿರಿಯ ಸದಸ್ಯರು ಸೇರಿದ್ದಾರೆ. ಅವರಲ್ಲಿ ಬಹುತೇಕರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA)ಬೆಟಾಲಿಯನ್ ನಂ.1 ನಲ್ಲಿ ಸಕ್ರಿಯರಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಪೊಳ್ಳು ನಕ್ಸಲ್ ಸಿದ್ದಾಂತ, ಅಮಾಯಕ ಆದಿವಾಸಿಗಳ ಮೇಲೆ ನಕ್ಸಲೀಯರು ನಡೆಸಿದ ದೌರ್ಜನ್ಯ ಮತ್ತು ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಿರಾಸೆಗೊಂಡು ಶರಣಾಗುತ್ತಿರುವುದಾಗಿ ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
ಶರಣಾದವರಲ್ಲಿ 9 ಮಂದಿ ಮಹಿಳೆಯರು ಸೇರಿದ್ದಾರೆ. ಸುಕ್ಮಾ ಮತ್ತು ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ತೀವ್ರ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದ ಬೆದರಿ ನಕ್ಸಲೀಯರ ಶರಣಾಗತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಚವಾಣ್ ಹೇಳಿದ್ದಾರೆ.
Advertisement