
ಜೈಪುರ: ರಾಜಸ್ಥಾನದಲ್ಲಿ ಶೈಕ್ಷಣಿಕ ವಿಷಯದ ಕುರಿತು ಚರ್ಚೆ ಮತ್ತೆ ಆರಂಭವಾಗಿದೆ. 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕ ‘ಆಜಾದಿ ಕೆ ಬಾದ್ ಕಾ ಸ್ವರ್ಣಿಮ್ ಭಾರತ್’ (ಸ್ವಾತಂತ್ರ್ಯದ ನಂತರ ಸುವರ್ಣ ಭಾರತ) ಮೇಲೆ ಶಿಕ್ಷಣ ಸಚಿವ ಮದನ್ ದಿಲಾವರ್ ನಿಷೇಧ ಹೇರಿದ್ದಾರೆ.
ಪಠ್ಯಪುಸ್ತಕದಲ್ಲಿ ‘ಆಧುನಿಕ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ನಾಯಕರನ್ನು ಅಸಮಾನವಾಗಿ ವೈಭವೀಕರಿಸಲಾಗಿದೆ ಎಂದು ಶಿಕ್ಷಣ ಸಚಿವರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ದಿಲಾವರ್, “ಪುಸ್ತಕವು ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳ ಬಗ್ಗೆ ಕೇವಲ ಒಂದು ಸಣ್ಣ ಉಲ್ಲೇಖವನ್ನು ಮಾತ್ರ ಹೊಂದಿದೆ. ಇದು ಆಧುನಿಕ ಭಾರತವನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ. ಕಾಂಗ್ರೆಸ್ ದೇಶಕ್ಕಾಗಿ ಎಲ್ಲವನ್ನೂ ಮಾಡಿದೆ ಎಂದು ಬಿಂಬಿಸುವಂತೆ ಇಡೀ ಪುಸ್ತಕವನ್ನು ವಿನ್ಯಾಸಗೊಳಿಸಲಾಗಿದೆ ಎಂಬಂತೆ ತೋರುತ್ತದೆ” ಎಂದಿದ್ದಾರೆ. ಒಬ್ಬ ಲೂಟಿಕೋರ ಮತ್ತು ಅತ್ಯಾಚಾರಿಯಾಗಿರುವ ಮೊಘಲ್ ಚಕ್ರವರ್ತಿ ಅಕ್ಬರ್‌ನಂತಹ ವ್ಯಕ್ತಿಗಳ ಉಲ್ಲೇಖ ರಾಜಸ್ಥಾನದಲ್ಲಿ ಶಾಲಾ ಶಿಕ್ಷಣದ ಭಾಗವಾಗಬಾರದು ಎಂದೂ ಈ ವೇಳೆಯೇ ಹೇಳಿದ್ದಾರೆ.
ಆದರೆ ರಾಜಸ್ಥಾನ ರಾಜ್ಯ ಪಠ್ಯಪುಸ್ತಕ ಮಂಡಳಿಯು 2025ರ ಶೈಕ್ಷಣಿಕ ಅವಧಿಗೆ ಈಗಾಗಲೇ ಪುಸ್ತಕದ 4.90 ಲಕ್ಷ ಪ್ರತಿಗಳನ್ನು ಮುದ್ರಿಸಿದೆ. ಸುಮಾರು 19,700 ಶಾಲೆಗಳಿಗೆ ವಿತರಣೆ ಪ್ರಗತಿಯಲ್ಲಿದ್ದು, ಸುಮಾರು ಶೇಕಡ 80 ಪುಸ್ತಕಗಳನ್ನು ಈಗಾಗಲೇ ರವಾನಿಸಲಾಗಿದೆ.ಸರಕಾರದ ಔಪಚಾರಿಕ ಅನುಮೋದನೆಯನ್ನು ಪಡೆದ ನಂತರವೇ ಪುಸ್ತಕಗಳನ್ನು ಮುದ್ರಿಸಲಾಗಿದೆ ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯು ಪ್ರಕಟಿಸಿದ ಪಠ್ಯಪುಸ್ತಕವು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಿಂದ ಬಳಕೆಯಲ್ಲಿದೆ. ಇದನ್ನು 11 ಮತ್ತು 12ನೇ ತರಗತಿಗಳಲ್ಲಿ ಎರಡು ಭಾಗಗಳಲ್ಲಿ ಕಲಿಸಲಾಗುತ್ತದೆ. ಅಧಿಕಾರಿಗಳು ಹೇಳುವಂತೆ ಪ್ರಸ್ತುತ ಆವೃತ್ತಿಯು ಹಿಂದಿನ ಆವೃತ್ತಿಯ ಮರುಮುದ್ರಣ. ಆದಾಗ್ಯೂ, ಪಠ್ಯಪುಸ್ತಕದ ಭಾಗ 2 ನಿರ್ದಿಷ್ಟ ವಿವಾದವನ್ನು ಹುಟ್ಟುಹಾಕಿದೆ. ಈ ಪುಸ್ತಕದ ಮುಖಪುಟದಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಛಾಯಾಚಿತ್ರಗಳಿವೆ.
ಇನ್ನು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದ್ದು ಈಗ ಪಠ್ಯಪುಸ್ತಕಕ್ಕೆ ನಿಷೇಧ ಹೇರುವ ಟೀಕೆಯ ಬಗ್ಗೆ ದಿಲಾವರ್ ಪ್ರತಿಕ್ರಿಯಿಸಿದ್ದು, “ವಿಷವು ಲಕ್ಷ ರೂಪಾಯಿಗಳ ಮೌಲ್ಯದ್ದಾಗಿದ್ದರೆ, ಅದನ್ನು ನೀವು ಸೇವಿಸುತ್ತೀರಾ? ಕಾಂಗ್ರೆಸ್ ಮಾಡಿದ್ದು ಇದನ್ನೇ. ಗಾಂಧಿ ಕುಟುಂಬವನ್ನು ವೈಭವೀಕರಿಸಲು ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ” ಎಂದು ಆರೋಪಿಸಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರೂ, ನರೇಂದ್ರ ಮೋದಿಯವರ ಸಾಧನೆಗಳನ್ನು ಅಷ್ಟೇನೂ ಉಲ್ಲೇಖಿಸಲಾಗಿಲ್ಲ. ಅವರು 370 ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ, ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಮತ್ತು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಆದರೂ, ಈ ಪುಸ್ತಕವು ಅವರ ಬಗ್ಗೆ ಹೆಚ್ಚು ಮಾಹಿತಿ ಹೊಂದಿಲ್ಲ. ಮತ್ತೊಂದೆಡೆ, ಕಾಂಗ್ರೆಸ್ ಪ್ರಧಾನ ಮಂತ್ರಿಗಳ ಬಗ್ಗೆ ಪುಟ ತುಂಬಾ ಮಾಹಿತಿಯಿದೆ. ಈ ನಿಟ್ಟಿನಲ್ಲಿ ಪಠ್ಯಪುಸ್ತಕವನ್ನು ನಿಷೇಧಿಸುವ ನಿರ್ಧಾರ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement