
ಚೆನ್ನೈ: ತಮಿಳು ನಾಡಿನ ತಿರುವಲ್ಲೂರು ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಸರಕು ಸಾಗಣೆ ರೈಲಿನಲ್ಲಿ ಭಾನುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿ ರೈಲು ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಭಾರೀ ಬೆಂಕಿಯಿಂದಾಗಿ ಜ್ವಾಲೆಗಳು ಮತ್ತು ದಟ್ಟ ಹೊಗೆ ಉಂಟಾಗಿದ್ದು, ಹಳಿಗಳ ಬಳಿ ವಾಸಿಸುವ ನಿವಾಸಿಗಳು ಭಯಭೀತರಾದರು, ಅವರನ್ನು ಸ್ಥಳಾಂತರಿಸಲಾಗಿದೆ.
ಎನ್ನೋರ್‌ನಿಂದ ಜೋಲಾರ್‌ಪೆಟ್ಟೈಗೆ ಕಚ್ಚಾ ತೈಲ ಸಾಗಿಸುತ್ತಿದ್ದ 45 ಬೋಗಿಗಳನ್ನು ಹೊಂದಿರುವ ಗೂಡ್ಸ್ ರೈಲು ಚೆನ್ನೈ ಸೆಂಟ್ರಲ್‌ನಿಂದ 43 ಕಿ.ಮೀ ದೂರದಲ್ಲಿರುವ ತಿರುವಲ್ಲೂರು-ಎಗತ್ತೂರು ವಿಭಾಗದ ಮೂಲಕ ಹಾದುಹೋಗುವಾಗ ಬೆಳಗ್ಗೆ 4.45 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತು. ಎರಡು ವ್ಯಾಗನ್‌ಗಳು ಹಳಿ ತಪ್ಪಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ನಿಖರವಾದ ಕಾರಣ ಇನ್ನೂ ತನಿಖೆಯಲ್ಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಬೆಳಗ್ಗೆ 9 ಗಂಟೆಯ ಹೊತ್ತಿಗೆ, ಐದು ಬೋಗಿಗಳನ್ನು ರೇಕ್‌ನಿಂದ ಬೇರ್ಪಡಿಸಲಾಗಿದೆ.
ನಾಲ್ಕು ಬೋಗಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಹೆಚ್ಚುವರಿ ಬೋಗಿಗಳಿಗೆ ಹರಡಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೃಹತ್ ಬೆಂಕಿಯಿಂದಾಗಿ ದಪ್ಪ ಹೊಗೆ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಳಿಗಳ ಬಳಿ ವಾಸಿಸುವ ನಿವಾಸಿಗಳನ್ನು ಅಧಿಕಾರಿಗಳು ಸ್ಥಳಾಂತರಿಸುವಂತೆ ಹೇಳಿದರು.
ರೈಲು ಸೇವೆಗಳಿಗೆ ವ್ಯತ್ಯಯ
ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿನ ಎಲ್ಲಾ ಉಪನಗರ ರೈಲು ಸೇವೆಗಳನ್ನು ಬೆಳಗ್ಗೆ 5 ಗಂಟೆಯಿಂದ ಸ್ಥಗಿತಗೊಳಿಸಲಾಯಿತು.
ಮಂಗಳೂರು ಮೇಲ್, ನೀಲಗಿರಿ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್, ಕೊಯಮತ್ತೂರು ಇಂಟರ್‌ಸಿಟಿ, ತಿರುವನಂತಪುರಂ ಮೇಲ್ ಮತ್ತು ಜೋಲಾರ್‌ಪೇಟೆ ಎಕ್ಸ್‌ಪ್ರೆಸ್ ಸೇರಿದಂತೆ ನಿನ್ನೆ ಚೆನ್ನೈಗೆ ಹೊರಟಿದ್ದ ಸುಮಾರು ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ಅರಕ್ಕೋಣಂ ಮತ್ತು ಕಟ್ಪಾಡಿ ನಡುವೆ ಅಲ್ಪಾವಧಿಗೆ ಸ್ಥಗಿತಗೊಳಿಸಲಾಯಿತು.
ಅದೇ ರೀತಿ, ಚೆನ್ನೈ-ಮೈಸೂರು ಶತಾಬ್ದಿ, ಚೆನ್ನೈ-ಕೊಯಮತ್ತೂರು ಕೋವೈ ಎಕ್ಸ್‌ಪ್ರೆಸ್, ಚೆನ್ನೈ-ತಿರುಪತಿ ಸಪ್ತಗಿರಿ ಎಕ್ಸ್‌ಪ್ರೆಸ್ ಮತ್ತು ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸೇರಿದಂತೆ ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 6 ರಿಂದ 8.30 ರವರೆಗೆ ಹೊರಡಬೇಕಿದ್ದ ಎಂಟು ಹೊರಹೋಗುವ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ನಾಲ್ಕು ರೈಲುಗಳನ್ನು ಗುಡೂರು ಮತ್ತು ರೇಣಿಗುಂಟ ಮೂಲಕ ತಿರುಗಿಸಲಾಯಿತು.
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳನ್ನು ನಿಯೋಜಿಸಲಾಗಿದ್ದು, ಪ್ರಸ್ತುತ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಸ್ಥಳವನ್ನು ಪರಿಶೀಲಿಸಿದ ತಿರುವಲ್ಲೂರು ಜಿಲ್ಲಾಧಿಕಾರಿ ಎಂ. ಪ್ರತಾಪ್, ಹಳಿಯುದ್ದಕ್ಕೂ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಕಿಯನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು. ಪರಿಹಾರ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅರಕ್ಕೋಣಂ ಘಟಕದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೆಚ್ಚಿನ ಸಹಾಯ ಅಥವಾ ಮಾಹಿತಿಗಾಗಿ ರೈಲು ಪ್ರಯಾಣಿಕರು 044-25354151 / 044-24354995 ನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ರೈಲ್ವೆಯ ಅಧಿಕೃತ ಹೇಳಿಕೆ ತಿಳಿಸಿದೆ.
Advertisement