
ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, 26/11 ಮುಂಬೈ ದಾಳಿ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಗಾರ್ತಿ ಮೀನಾಕ್ಷಿ ಜೈನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ.
ಈ ಸಂಬಂಧ ಶನಿವಾರ ತಡರಾತ್ರಿ ಅಧಿಸೂಚನೆ ಹೊರಡಿಸಲಾಗಿದ್ದು, ನಾಲ್ವರನ್ನು ಮೇಲ್ಮನೆಗೆ ರಾಷ್ಟ್ರಪತಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸಂವಿಧಾನದ 80 (1)ಎ ವಿಧಿಯಡಿ ನೀಡಲಾದ ವಿಶೇಷ ಅಧಿಕಾರದಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಉಜ್ವಲ್ ನಿಕಮ್: ಈ ನಾಮನಿರ್ದೇಶನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಉಜ್ವಲ್ ನಿಕಮ್ ಅವರು ವಕೀಲರಾಗಿ ಮಾತ್ರವಲ್ಲದೇ ಪ್ರಮುಖ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಮುಂಚೂಣಿ ಪಾತ್ರ ವಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದಲ್ಲಿ ಸರ್ಕಾರದ ವಕೀಲರಾಗಿ ನಿಕಮ್ ಕಾರ್ಯ ನಿರ್ವಹಿಸಿದ್ದಾರೆ. ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುಂಬೈ ಉತ್ತರ ಕೇಂದ್ರ ಸ್ಥಾನದಿಂದ ಸ್ಪರ್ಧಿಸಿದ್ದರು.
ಹರ್ಷವರ್ಧನ್ ಶ್ರಿಂಗ್ಲಾ: ಇವರು ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದು, ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಜಿ-20 ಅಧ್ಯಕ್ಷತೆಯಲ್ಲೂ ನೆರವು ನೀಡಿದ್ದಾರೆ. ಅವರನ್ನು ಮೇಲ್ಮನೆಗೆ ರಾಷ್ಟ್ರಪತಿ ಅವರು ನಾಮನಿರ್ದೇಶನ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರಿಂಗ್ಲಾ ಅವರು ಅಮೆರಿಕ ಮತ್ತು ಥೈಲ್ಯಾಂಡ್ ನ ಭಾರತದ ರಾಯಭಾರಿಯಾಗಿ ಮತ್ತು ಬಾಂಗ್ಲಾದೇಶದ ಹೈ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 1984ರ ಬ್ಯಾಚಿನ ಭಾರತದ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ಶ್ರಿಂಗ್ಲಾ, 2023ರಲ್ಲಿ ಭಾರತ ಅಧ್ಯಕ್ಷತೆಯ ಜಿ-20ಯ ಮುಖ್ಯ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಡಾ. ಮೀನಾಕ್ಷಿ ಜೈನ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ನಾಮನಿರ್ದೇಶನ ಮಾಡಿರುವುದು ಅತೀವ ಸಂತಸದ ವಿಷಯವಾಗಿದೆ. ಇತಿಹಾಸಗಾರ್ತಿ, ಸಂಶೋಧಕರಾಗಿರುವ ಅವರು, ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹೋನ್ನತ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಜೈನ್ ಅವರು ದೆಹಲಿ ವಿವಿಯ ಗಾರ್ಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಅವರಿಗೆ ಪದ್ಮಶ್ರಿ ಪ್ರಶಸ್ತಿಯೂ ಸಂದಿದೆ. ಭಾರತದ ಇತಿಹಾಸ, ನಾಗರಿಕತೆ ಮತ್ತು ಬ್ರಿಟಿಷ್ ಅವಧಿಯಲ್ಲಿನ ಭಾಷೆಗಳು ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಸದಾನಂದನ್ ಮಾಸ್ಟರ್ ಅವರ ಜೀವನವು ಧೈರ್ಯ ಮತ್ತು ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿರೂಪವಾಗಿದೆ ಎಂದು ಮೋದಿ ಹೇಳಿದ್ದಾರೆ. ಶಿಕ್ಷಕ, ಸಮಾಜ ಸೇವಕರಾಗಿಯೂ ಅವರ ಶ್ರಮ ಶ್ಲಾಘನೀಯವಾಗಿದೆ.ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರಪತಿ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಸಾಮಾಜಿಕ ಜಾಲತಾಣ ಎಕ್ಸ್ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ. ಮಾಜಿ ಶಿಕ್ಷಕರಾಗಿರುವ ಸದಾನಂದನ್ ಅವರು ಕೇರಳದ ಕಣ್ಣೂರು ಜಿಲ್ಲೆಯಲ್ಲಿ 2016 ಮತ್ತು 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.1994ರಲ್ಲಿ ಪಕ್ಷ ಬದಲಾಯಿಸಿದ ನಂತರ ಅವರ ಎರಡೂ ಕಾಲುಗಳನ್ನು ಎದುರಾಳಿಗಳು ಕತ್ತರಿಸಿದ್ದಾರೆ.
Advertisement