
ಜೈಪುರ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ರಾಜಸ್ಥಾನದ ನಿವಾಸಿ, ತೆಲಂಗಾಣದ ವ್ಯಕ್ತಿ ಮತ್ತು ಒಡಿಶಾದ ಎಂಜಿನಿಯರ್ ಸೇರಿದಂತೆ ಮೂವರು ಭಾರತೀಯರನ್ನು ಜುಲೈ 1 ರಂದು ಅಪಹರಿಸಲಾಗಿತ್ತು.ಆದರೆ ಇಂದಿನವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿರುವ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮೀನ್ (JNIM)ನ ಶಂಕಿತ ಭಯೋತ್ಪಾದಕರು ನಡೆಸಿದ ಶಸ್ತ್ರಸಜ್ಜಿತ ದಾಳಿ ವೇಳೆ ಈ ಅಪಹರಣ ನಡೆದಿದೆ. ಪಶ್ಚಿಮ ಮಾಲಿಯ ಕೇಯೆಸ್ ಪ್ರದೇಶದಲ್ಲಿರುವ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ.
ಇಂದಿನವರೆಗೆ ಈ ಗುಂಪು ಬಹಿರಂಗವಾಗಿ ಅಪಹರಣದ ಹೊಣೆ ಹೊತ್ತುಕೊಂಡಿಲ್ಲ. ಆದರೆ JNIM ಇತ್ತೀಚಿಗೆ ನಡೆಸಿದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ದಾಳಿ ನಡೆದಿದೆ. ಈ ಭಯೋತ್ಪಾದಕರು ಈ ಹಿಂದೆ ಮಾಲಿ, ನೈಜರ್ ಮತ್ತು ಬುರ್ಕಿನಾ ಫಾಸೊದಾದ್ಯಂತ ವಿದೇಶಿ ಕೆಲಸಗಾರರು, ಸರ್ಕಾರಿ ಕಟ್ಟಡಗಳು ಮತ್ತು ಮಿಲಿಟರಿ ಹೊರಠಾಣೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.
ಸಂತ್ರಸ್ತರಲ್ಲಿ ಓರ್ವನನ್ನು ಜೈಪುರ ಮೂಲದ ಪ್ರಕಾಶ್ ಚಂದ್ ಜೋಶಿ ಎಂದು ಗುರುತಿಸಲಾಗಿದೆ. ಮತ್ತೊಬ್ಬರು ತೆಲಂಗಾಣದ ಮಿರ್ಯಾಲಗುಡಾ ನಿವಾಸಿ 45 ವರ್ಷದ ಅಮರಲಿಂಗೇಶ್ವರ ರಾವ್, ಇವರು 2015 ರಿಂದ ಮಾಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರನೆಯವರು ಒಡಿಶಾದ ಗಂಜಾಂ ಜಿಲ್ಲೆಯ ಪಿ ವೆಂಕಟರಾಮನ್ (28) ಮುಂಬೈ ಮೂಲದ ಬ್ಲೂ ಸ್ಟಾರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ಸುಮಾರು ಆರು ತಿಂಗಳಿಂದ ಡೈಮಂಡ್ ಸಿಮೆಂಟ್ ಘಟಕದಲ್ಲಿ ನೆಲೆಸಿದ್ದರು.
ಅಪಹರಣಕ್ಕೊಳಗಾದ ವ್ಯಕ್ತಿಗಳ ಗುರುತುಗಳನ್ನು ಭಾರತೀಯ ವಿದೇಶಾಂಗ ಸಚಿವಾಲಯ (MEA)ದೃಢಪಡಿಸಿದೆ. ಮತ್ತು ಮಾಲಿ ಅಧಿಕಾರಿಗಳು, ಸ್ಥಳೀಯ ಕಾನೂನು ಜಾರಿ ಮತ್ತು ಸಂತ್ರಸ್ತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ಸರಿ ಸುಮಾರು 400 ಭಾರತೀಯ ಪ್ರಜೆಗಳು ಪ್ರಸ್ತುತ ಮಾಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ನಿರ್ಮಾಣ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಮಾಲಿಯನ್ ರಾಜಧಾನಿ ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘಟನೆಯ ನಂತರ ಸ್ಥಳೀಯ ಅಧಿಕಾರಿಗಳು ಮತ್ತು ಕಾನೂನು ಜಾರಿ ಸಂಸ್ಥೆಯೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದೆ.
Advertisement