
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) 18 ದಿನಗಳ ವಾಸ್ತವ್ಯದ ನಂತರ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಸೋಮವಾರ ಮಧ್ಯಾಹ್ನ ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸಿದ್ದು, ಭೂಮಿಯತ್ತ ತಮ್ಮ ಪ್ರಯಾಣ ಆರಂಭಿಸಲು ಸಿದ್ಧರಾಗಿದ್ದಾರೆ.
ಮಿಷನ್ ಪೈಲಟ್ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ -ವಿಸ್ನಿವ್ಸ್ಕಿ ಹಾಗೂ ಹಂಗೇರಿಯ ಟಿಬೋರ್ ಕಾಪು ಅವರು ಇಂದು ಮಧ್ಯಾಹ್ನ 2.25ಕ್ಕೆ ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆ ಪ್ರವೇಶಿಸಿ, ತಮ್ಮ ಬಾಹ್ಯಾಕಾಶ ಸೂಟ್‌ಗಳನ್ನು ಧರಿಸಿದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿದ ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಇಂದು ಮಧ್ಯಾಹ್ನ 2:37 ಕ್ಕೆ ಮುಚ್ಚಲಾಯಿತು ಮತ್ತು ಸಂಜೆ 4:35 ಕ್ಕೆ ಕಕ್ಷೀಯ ಪ್ರಯೋಗಾಲಯದಿಂದ ಅನ್‌ಲಾಕ್ ಮಾಡುವ ಮೂಲಕ ಭೂಮಿಯತ್ತ ಪ್ರಯಾಣ ಆರಂಭವಾಗಲಿದೆ.
ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮನ ಕಾರ್ಯವಿಧಾನಗಳನ್ನು ನಾಸಾ ನೇರ ಪ್ರಸಾರ ಮಾಡಿತು.
ಭಾರತೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 3ಕ್ಕೆ ಈ ನಾಲ್ವರು ಗಗನಯಾತ್ರಿಗಳು ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸ್ಪ್ಲಾಷ್ ಲ್ಯಾಂಡ್ ಆಗಲಿದ್ದಾರೆ.
ಭಾನವಾರ ನಿರ್ಗಮಿಸಲಿರುವ ಅಂತರಿಕ್ಷಯಾನಿಗಳನ್ನು ಭಾನುವಾರ ಐಎಸ್‌ಎಸ್‌ನಲ್ಲಿ ಔಪಚಾರಿಕವಾಗಿ ಬೀಳ್ಕೊಡಲಾಯಿತು.
Advertisement