
ನವದೆಹಲಿ: ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತದ ತನಿಖಾ ಬ್ಯೂರೋ ಎಎಐವಿ( AAIB) ನಡೆಸಿದ ಪ್ರಾಥಮಿಕ ವರದಿಯು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಉತ್ತರಗಳನ್ನು ನೀಡುವುದಿಲ್ಲ ಎಂದು ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಏರ್ ಲೈನ್ ಪೈಲಟ್ಸ್ ಅಸೋಸಿಯೇಷನ್ (IFALPA)ಹೇಳಿದೆ. ವದಂತಿಗಳಿಂದ ದೂರ ಇರುವಂತೆ ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದೆ
ಜೂನ್ 12 ರಂದು 260 ಮಂದಿ ಮೃತಪಟ್ಟಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಅಪಘಾತ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಶನಿವಾರ ನೀಡಿದ ಪ್ರಾಥಮಿಕ ವರದಿಯಲ್ಲಿ ವಿಮಾನ ಟೇಕ್ ಆಫ್ ಆದ ಒಂದು ಸೆಕೆಂಡ್ ಅಂತರದಲ್ಲಿ ಇಂಜಿನ್ ನ ಇಂಧನ ಸ್ವಿಚ್ ಕಡಿತ ಆಗಿದೆ. ದುರಂತಕ್ಕೂ ಮುನ್ನಾ ವಿಮಾನದ ಕಾಕ್ ಪಿಟ್ ನಲ್ಲಿ ಗದ್ದಲವೂ ಕಂಡುಬಂದಿದೆ ಎಂದು ಹೇಳಲಾಗಿದೆ.
ಏರ್ ಇಂಡಿಯಾ ವಿಮಾನ 171 ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್‌ವಿಕ್‌ಗೆ ತೆರಳುತ್ತಿತ್ತು. ಕಾಕ್‌ಪಿಟ್ ವಾಯ್ಸ್ ರೆಕಾರ್ಡಿಂಗ್ ಉಲ್ಲೇಖಿಸಿ, ಶನಿವಾರ ಬಿಡುಗಡೆಯಾದ 15 ಪುಟಗಳ ಪ್ರಾಥಮಿಕ ವರದಿಯಲ್ಲಿ ಯಾಕೆ ಸ್ವಿಚ್ ಕಡಿತವಾಗಿದೆ ಎಂದು ಪೈಲಟ್ ಒಬ್ಬರು ಕೇಳುತ್ತಾರೆ. ಆ ರೀತಿ ಮಾಡಿಲ್ಲ ಅಂತಾ ಮತ್ತೋರ್ವ ಪೈಲಟ್ ಹೇಳುತ್ತಾರೆ. ಪ್ರಾಥಮಿಕ ವರದಿಯಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಪೈಲಟ್ ದೋಷವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಕೆಲವು ವಲಯಗಳಲ್ಲಿ ಊಹಾಪೋಹಗಳಿವೆ.
"ಈ ಪ್ರಾಥಮಿಕ ವರದಿಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಉತ್ತರ ನೀಡುವುದಿಲ್ಲ. ಹೀಗಾಗಿ ಅದನ್ನು ಕೇವಲ ಊಹೆ ಎಂದು ಪರಿಗಣಿಸಬಹುದು. ಇದು ಉತ್ತಮ ರೀತಿಯ ತನಿಖೆಗೆ ನೆರವಾಗಲ್ಲ ಎಂದು IFALPA ಜುಲೈ 14 ರಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಹಂತದಲ್ಲಿ ಯಾವುದೇ ಸುರಕ್ಷತಾ ಶಿಫಾರಸುಗಳನ್ನು ನೀಡಲಾಗಿಲ್ಲ ಎಂದು ವರದಿಯು ಸ್ಪಷ್ಟವಾಗಿ ಹೇಳುತ್ತದೆ. ಅಪಘಾತಕ್ಕೆ ಕಾರಣ ಕಂಡುಹಿಡಿಯುವ ಭಾರತದ AAIB ಯ ಪ್ರಯತ್ನಗಳನ್ನು ಬೆಂಬಲಿಸಲು ಫೆಡರೇಶನ್ ಬದ್ಧವಾಗಿದೆ ಎಂದು IFALPA ಹೇಳಿದೆ. ಇದು 100 ದೇಶಗಳಿಂದ 1 ಲಕ್ಷ ಪೈಲಟ್‌ಗಳನ್ನು ಸದಸ್ಯರನ್ನಾಗಿ ಹೊಂದಿರುವುದಾಗಿ ಹೇಳಿಕೊಂಡಿದೆ.
AAIB ತನಿಖೆಯ ದಿಕ್ಕು ಪೈಲಟ್ ದೋಷದ ಕಡೆಗೆ ತಿರುಗುವುದು ಪಕ್ಷಪಾತವನ್ನು ಸೂಚಿಸುತ್ತದೆ. ಈ ಕುರಿತು ನ್ಯಾಯಯುತ, ಸತ್ಯ ಆಧಾರಿತ ತನಿಖೆಯಾಗಬೇಕಿರುವುದರಿಂದ ಊಹೆಯನ್ನು ತಿರಸ್ಕರಿಸುವುದಾಗಿ IFALPA ಸದಸ್ಯರಾದ ಏರ್‌ಲೈನ್ ಪೈಲಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ALPA) ಶನಿವಾರ ಹೇಳಿತ್ತು.
ಎಎಐಬಿ ಪ್ರಾಥಮಿಕ ವರದಿಯು ಕೇವಲ ತನಿಖೆಯ ಆರಂಭಿಕ ಹಂತಗಳಲ್ಲಿ ಪಡೆದ ದತ್ತಾಂಶವಾಗಿದ್ದು, ವಾಸ್ತವಿಕ ಮಾಹಿತಿ ಮತ್ತು ತನಿಖೆಯ ಪ್ರಗತಿಯ ಸೂಚನೆಯನ್ನು ಮಾತ್ರ ಒಳಗೊಂಡಿದೆ. ಪ್ರಾಥಮಿಕ ಮಾಹಿತಿಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಪ್ರತಿಯೊಬ್ಬರೂ ತಪ್ಪಿಸಬೇಕು ಎಂದು IFALPA ಹೇಳಿದೆ.
Advertisement