
'ವೆಟ್ಟುವಂ' ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ವೇಳೆಯಲ್ಲಿ ಜನಪ್ರಿಯ ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವಿಗೆ ಸಂಬಂಧಿಸಿದಂತೆ ನಿರ್ದೇಶಕ ಪಾ ರಂಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಾನುವಾರ ಈ ಅಪಘಾತ ನಡೆದಿತ್ತು.
ಮೋಹನ್ ರಾಜ್ ಚಲಾಯಿಸುತ್ತಿದ್ದ ಕಾರು ಎತ್ತರಕ್ಕೆ ಹಾರಿ ನೆಲಕ್ಕೆ ಬರುವಂತೆ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಅಪಾಯಕಾರಿ ಸಾಹಸ ಮೋಹನ್ ಸಾವಿನೊಂದಿಗೆ ಅಂತ್ಯವಾಗಿದೆ.
ಅಪಘಾತ ಸಂಭವಿಸಿದ ನಂತರ ಆರಂಭಿಕವಾಗಿ ಎಫ್ ಐಆರ್ ದಾಖಲಿಸಲಾಗಿತ್ತು. ಆದರೆ ಸಂಬಂಧಿತ ವ್ಯಕ್ತಿಗಳು ಸೇರಿದಂತೆ ಹೆಚ್ಚುವರಿ ಆರೋಪಗಳನ್ನು ಸೇರಿಸಲಾಗಿದೆ.
ನಿರ್ದೇಶಕ ಪಾ ರಂಜಿತ್, ನೀಲಂ ಪ್ರೊಢಕ್ಷನ್ ಎಕ್ಸಿಕ್ಯೂಟಿವ್ ರಾಜ್ ಕಮಲ್, ಸ್ಟಂಟ್ ಕಲಾವಿದ ವಿನೋತ್ ಮತ್ತು ಕಾರಿನ ಮಾಲೀಕ ಪ್ರಭಾಕರನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (1), 289 ಮತ್ತು 125ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೆಕ್ಷನ್ 106(1) ನಿರ್ಲಕ್ಷದಿಂದ ಸಾವಿಗೆ ಕಾರಣವಾಗುವುದಕ್ಕೆ ಸಂಬಂಧಿಸಿದ್ದು, ಆರೋಪ ಸಾಬೀತಾದರೆ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಅರ್ಹರಾಗಿರುತ್ತಾರೆ. ಗೊತ್ತಿದ್ದು ಅಥವಾ ನಿರ್ಲಕ್ಷ್ಯದಿಂದ ಬೇರೊಬ್ಬ ವ್ಯಕ್ತಿಗೆ ಹಾನಿ ಅಥವಾ ಗಾಯ ಉಂಟುಮಾಡಿದರೆ ಅಂತಹವರ ವಿರುದ್ಧ ಸೆಕ್ಷನ್ 289 ಅಡಿ ಆರು ತಿಂಗಳು ಜೈಲು ಶಿಕ್ಷೆ ಮತ್ತು ಐದು ಸಾವಿರ ದಂಡ ಶಿಕ್ಷೆ ವಿಧಿಸಲಾಗುತ್ತದೆ.
ಇನ್ನೂ ಸೆಕ್ಷನ್ 125 ಇತರರ ಜೀವನ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಕ್ಕೆ ಸಂಬಂಧಿಸಿದೆ. ಇದರಡಿ ಮೂರು ತಿಂಗಳಿನಿಂದ ಆರು ತಿಂಗಳವರೆಗೂ ಜೈಲು ಶಿಕ್ಷೆ ಹಾಗೂ 2,500 ರಿಂದ 5,000 ವರೆಗೂ ದಂಡ ವಿಧಿಸಲಾಗುತ್ತದೆ.
Advertisement