

ನವದೆಹಲಿ: ಮುಂಬರುವ ಸಂಸತ್ ಮುಂಗಾರು ಅಧಿವೇಶನದಿಂದ ಲೋಕಸಭೆಯ ಸಂಸದರಿಗೆ ಮಲ್ಟಿ ಮೀಡಿಯಾ ಸಾಧನ ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಆದರೆ ರಾಜ್ಯಸಭೆಯ ಕಾಂಗ್ರೆಸ್ ವಿಪ್ ಮಾಣಿಕ್ಕಮ್ ಟ್ಯಾಗೋರ್ ಅವರು ಮಂಗಳವಾರ ಈ ಕ್ರಮವನ್ನು "ದೋಷಪೂರಿತ" ಎಂದು ಟೀಕಿಸಿದ್ದು, ಹೊಣೆಗಾರಿಕೆ ಖಚಿತಪಡಿಸುವ ಗುರಿ ಹೊಂದಿದ್ದರೆ ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಈ ಹೊಸ ವ್ಯವಸ್ಥೆಯು ಸಂಸದರು ತಮಗೆ ಹಂಚಿಕೆಯಾದ ಸೀಟ್ ನಲ್ಲಿ ಕುಳಿತು ಎಲೆಕ್ಟ್ರಾನಿಕ್ ಮೂಲಕ ತಮ್ಮ ಹಾಜರಿ ನಮೂದಿಸಬೇಕಾಗುತ್ತದೆ. ಪ್ರಸ್ತುತ ಸಂಸದರು ಸದನದ ದ್ವಾರದ ಬಳಿ ನಿಂತು ಹಾಜರಾತಿ ಹಾಕಿ ಸದನ ಪ್ರವೇಶಿಸುತ್ತಿದ್ದು, ಇನ್ನು ಮುಂದೆ ಮಲ್ಟಿ ಮೀಡಿಯಾ ಸಾಧನದ ನೆರವಿನಿಂದ ಕುಳಿತಲ್ಲೇ ಹಾಜರಿ ಹಾಕಲಿದ್ದಾರೆ.
ಆದಾಗ್ಯೂ, ವಕ್ಫ್ ಮಂಡಳಿ ಮಸೂದೆಯನ್ನು ಮತಕ್ಕೆ ಹಾಕಿದ ಸಮಯದಲ್ಲಿ ಈ ವ್ಯವಸ್ಥೆ ವಿಫಲವಾಗಿರುವುದನ್ನು ಉಲ್ಲೇಖಿಸಿ ಮಾಣಿಕ್ಕಮ್ ಟ್ಯಾಗೋರ್ ಅವರು ಎಕ್ಸ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. "ದೋಷಪೂರಿತ ಈ ವ್ಯವಸ್ಥೆಯನ್ನು ಏಕೆ ಪುನರಾವರ್ತಿಸಬೇಕು?" ಎಂದು ಪ್ರಶ್ನಿಸಿದ್ದಾರೆ.
"ಹಾಜರಾತಿ ನಮೂದಿಸುವುದು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಗ್ಗೆಯಾಗಿದ್ದರೆ, ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ ನೀಡಲಾಗುತ್ತಿದೆ?" ಪ್ರಧಾನಿ ಸಾಮಾನ್ಯವಾಗಿ ಸಾಮಾನ್ಯ ಅಧಿವೇಶನದಲ್ಲಿ "18 ರಿಂದ 28 ದಿನಗಳ ಪೈಕಿ 3 ರಿಂದ 4 ದಿನಗಳು" ಮಾತ್ರ ಇರುತ್ತಾರೆ. "ಪ್ರಧಾನಿಯವರು ಪ್ರಕ್ರಿಯೆಗಿಂತ ಮೇಲಿರುವ ಬದಲು ಇತರರಿಗೆ ಮಾದರಿಯಾಗಿ ಮುನ್ನಡೆಸಬೇಕಲ್ಲವೇ?" ಎಂದು ಕಾಂಗ್ರೆಸ್ ಸಂಸದ ವಾದಿಸಿದ್ದಾರೆ.
ಕಾಗದ ರಹಿತ ಹಾಜರಾತಿ ವಿಧಾನ ಪಾಲನೆಯಾಗಬೇಕು ಎಂಬ ಉದ್ದೇಶದಿಂದ ಕಳೆದ ವರ್ಷ ಪ್ರವೇಶ ದ್ವಾರದ ಸಮೀಪ ಡಿಜಿಟಲ್ ಹಾಜರಾತಿ ವಿಧಾನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಾರಿಗೊಳಿಸಿದ್ದರು. ಈಗ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸ್ಪೀಕರ್ ಉತ್ಸುಕರಾಗಿದ್ದಾರೆ ಮತ್ತು ಸದಸ್ಯರು ಅದಕ್ಕೆ ಹೊಂದಿಕೊಳ್ಳಲು ಸಮಯ ನೀಡಲಿದ್ದಾರ ಎಂದು ಮೂಲಗಳು ತಿಳಿಸಿವೆ.
Advertisement